Advertisement

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

04:35 PM Sep 22, 2023 | ನಾಗೇಂದ್ರ ತ್ರಾಸಿ |

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಮೀಸಲಿಡುವ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದ ಬಳಿಕ ಕ್ಷೇತ್ರ ಪುನರ್‌ ವಿಂಗಡಣೆ(Delimitation) ಕಾರ್ಯಸೂಚಿಗೆ ಸಂಬಂಧಿಸಿದಂತೆ ದಕ್ಷಿಣ ರಾಜ್ಯಗಳ ವಿಪಕ್ಷಗಳಲ್ಲಿ ಕಳವಳ ಹೆಚ್ಚಾಗತೊಡಗಿದೆ.

Advertisement

ಇದನ್ನೂ ಓದಿ:J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

ದೇಶಾದ್ಯಂತ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಜನಗಣತಿ ಆಧಾರದ ಮೇಲೆ ನಡೆಯಲಿದೆ. ಬುಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಡಿಎಂಕೆ ಸಂಸದೆ ಕನಿಮೋಳಿ, ಒಂದು ವೇಳೆ ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಪುನರ್‌ ವಿಂಗಡಣೆ ಮಾಡಿದರೆ, ಇದರ ಪರಿಣಾಮ ದಕ್ಷಿಣದ ರಾಜ್ಯಗಳು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ …ಇದು ನಮ್ಮ ನೆತ್ತಿಯ ಮೇಲಿನ ತೂಗುಕತ್ತಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಇದೀಗ ಮಹಿಳಾ ಮೀಸಲು ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ. ಆದರೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಬೇಕಿದ್ದರೆ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಕಾರ್ಯ ಪೂರ್ಣಗೊಳ್ಳಬೇಕು.!

ಭಾರತ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸಿದಾಗ ಒಟ್ಟು 489 ಲೋಕಸಭೆ ಕ್ಷೇತ್ರಗಳಿದ್ದವು. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುವುದು ವಾಡಿಕೆ. ಅದೇ ಜನಗಣತಿಯ ಆಧಾರದ ಮೇಲೆ ಹತ್ತು ವರ್ಷಕ್ಕೊಮ್ಮೆ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿತ್ತು. ಅದರಂತೆ 1966ರಲ್ಲಿ (1961ರ ಜನಗಣತಿ ಪ್ರಕಾರ) 489ರಿಂದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 520ಕ್ಕೆ ಏರಿಕೆಯಾಗಿತ್ತು. ಬಳಿಕ 1971ರಲ್ಲಿ ಜನಗಣತಿಯ ನಂತರ 1976ರಲ್ಲಿ ಕ್ಷೇತ್ರಗಳ ಸಂಖ್ಯೆ 543ಕ್ಕೆ ಹೆಚ್ಚಳವಾಗಿತ್ತು. ಆದರೆ 1976ರಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕ್ಷೇತ್ರಗಳ ಪುನರ್‍ ವಿಂಗಡಣೆ ಮುಂದಿನ 25 ವರ್ಷಗಳವರೆಗೆ ಫ್ರೀಜ್ ಮಾಡಿ ಸಂವಿಧಾನಾತ್ಮಕ ಕಡಿವಾಣ ಹಾಕಲಾಯಿತು.

Advertisement

ಆ 25 ವರ್ಷಗಳ ಅವಧಿ 2001ಕ್ಕೆ ಮುಕ್ತಾಯಗೊಂಡಿದ್ದು, 2002ಕ್ಕೆ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಕಾರ್ಯ ನಡೆಯಬೇಕಿತ್ತು. ನಂತರ ಮತ್ತೆ 25 ವರ್ಷಗಳವರೆಗೆ ಕ್ಷೇತ್ರ ಪುನರ್‌ ವಿಂಗಡಣೆ ಕಾರ್ಯ ನಡೆಸದಂತೆ ನಿರ್ಣಯ ಕೈಗೊಳ್ಳಲಾಯ್ತು. ಒಂದು ವೇಳೆ ನಿಗದಿಯಂತೆ 2026ರಲ್ಲಿ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಕಾರ್ಯ ಆರಂಭಿಸಿದಲ್ಲಿ ದಕ್ಷಿಣದ ರಾಜ್ಯಗಳು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ.

ಯಾವ ರಾಜ್ಯಗಳು ಕ್ಷೇತ್ರ ಕಳೆದುಕೊಳ್ಳಲಿವೆ, ಯಾವ ರಾಜ್ಯಕ್ಕೆ ಲಾಭ?

2019ರ ಲೋಕಸಭಾ ಚುನಾವಣೆಗೂ ಮುನ್ನ ಕಾರ್ನೆಗೀ ಎಂಡೋಮೆಂಟ್‌ ಫಾರ್‌ ಇಂಟರ್‌ ನ್ಯಾಷನಲ್‌ ಪೀಸ್‌ ನ ಸಂಶೋಧನಾ ಪ್ರಬಂಧದ ಪ್ರಕಾರ, ತಮಿಳುನಾಡು ಮತ್ತು ಕೇರಳ 16 ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಆದರೆ ಉತ್ತರ ಭಾರತದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ ಎಸ್‌ ಪಿ ಸಂಸದ ಎನ್‌ ಕೆ ಪ್ರೇಮ್‌ ಚಂದ್ರನ್‌, ದಕ್ಷಿಣದ ರಾಜ್ಯಗಳು ಕ್ಷೇತ್ರಗಳನ್ನು ಕಳೆದುಕೊಂಡು, ಉತ್ತರದ ರಾಜ್ಯಗಳು ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುವುದು ಅನ್ಯಾಯ ಮಾಡಿದಂತೆ. ಸಂವಿಧಾನದ ಪ್ರಕಾರ 1971ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡಬೇಕಾಗಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣದ ನೀತಿಯನ್ನು ಪಾಲಿಸಿದ್ದೇವೆ. ಹಾಗಾಗಿ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ ವಿಧಿಸಬೇಡಿ ಎಂದು ತಿಳಿಸಿದ್ದಾರೆ.

2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ ವಿಂಗಡಣೆಯಾದಲ್ಲಿ ತಮಿಳುನಾಡು ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಪ್ರಸ್ತುತ ತಮಿಳುನಾಡು 39 ಲೋಕಸಭಾ ಕ್ಷೇತ್ರವನ್ನು ಹೊಂದಿದ್ದು, ಕ್ಷೇತ್ರ ಪುನರ್‌ ವಿಂಗಡಣೆಯಾದರೆ 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಅದೇ ರೀತಿ ಕೇರಳ 20 ಲೋಕಸಭಾ ಕ್ಷೇತ್ರ ಹೊಂದಿದ್ದು, ಕ್ಷೇತ್ರ ಪುನರ್‌ ವಿಂಗಡಣೆಗೊಂಡರೆ 8 ಕ್ಷೇತ್ರಗಳು ಕೈತಪ್ಪಲಿದೆ. ಕರ್ನಾಟಕ ಮೂರು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಆಂಧ್ರಪ್ರದೇಶ 8, ಒಡಿಶಾ 3, ತೆಲಂಗಾಣ 5 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ.

ಉತ್ತರಪ್ರದೇಶದಲ್ಲಿ ಪ್ರಸ್ತುತ 80 ಲೋಕಸಭಾ ಕ್ಷೇತ್ರಗಳಿದ್ದು, ಕ್ಷೇತ್ರ ಪುನರ್‌ ವಿಂಗಡಣೆಗೊಂಡಲ್ಲಿ 11 ಕ್ಷೇತ್ರಗಳು ಹೆಚ್ಚಳವಾಗಲಿದೆ. ಇದರೊಂದಿಗೆ ಉತ್ತರಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 91ಕ್ಕೆ ಏರಿಕೆಯಾಗಲಿದೆ. ಬಿಹಾರ ಪ್ರಸ್ತುತ 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕ್ಷೇತ್ರ ಪುನರ್‌ ವಿಂಗಡಣೆಗೊಂಡಲ್ಲಿ 10 ಕ್ಷೇತ್ರ ಹೆಚ್ಚಳವಾಗುವ ಮೂಲಕ ಒಟ್ಟು 50 ಸ್ಥಾನಕ್ಕೆ ಏರಿಕೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಗೊಂಡರೆ ಉತ್ತರ ಭಾರತದಲ್ಲಿ 32ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಹೆಚ್ಚಳವಾಗಲಿದ್ದು, ದಕ್ಷಿಣ ಭಾರತ 24 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅಲ್ಲದೇ ಹಾಲಿ ಲೋಕಸಭೆಯಲ್ಲಿ 543 ಸ್ಥಾನಗಳಿವೆ. ಕ್ಷೇತ್ರ ಪುನರ್‌ ವಿಂಗಡಣೆಗೊಂಡಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 575ರಿಂದ 580ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಕ್ಷೇತ್ರ ಪುನರ್‌ ವಿಂಗಡಣೆಯೊಂದಿಗೆ ಶೇ.33ರಷ್ಟು ಮಹಿಳಾ ಮೀಸಲು ಜಾರಿಗೊಂಡಲ್ಲಿ ಸುಮಾರು 210 ಮಹಿಳೆಯರು ಸಂಸತ್‌ ಪ್ರವೇಶಿಸಲು ಹಾದಿ ಮಾಡಿಕೊಟ್ಟಂತಾಗಲಿದೆ. (ಲೋಕಸಭೆಯ 543 ಸ್ಥಾನಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲು ಜಾರಿಗೊಂಡರೆ 181 ಮಹಿಳಾ ಜನಪ್ರತಿನಿಧಿಗಳಿಗೆ ಅವಕಾಶ ಸಿಗಲಿದೆ.)

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next