ನವದೆಹಲಿ: ಫೇಸ್ಬುಕ್ ಮೂಲಕ ಸ್ನೇಹಿತನಾದವನ ಜೊತೆ ತೆರಳಿದ ಮಹಿಳೆಯ ಮೇಲೆ 25 ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ದೆಹಲಿ ಸಮೀಪ ಮೇ 3ರಂದು ನಡೆದಿದ್ದು, ಘಟನೆ ನಡೆದ 9 ದಿನಗಳ ಬಳಿಕ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಸುಮಾರು 4 ವರ್ಷಗಳಿಂದ ದೆಹಲಿಯಲ್ಲಿ ವಾಸವಿದ್ದ ಸಂತ್ರಸ್ಥೆಗೆ ಕಳೆ ಜನವರಿಯಲ್ಲಿ 23 ವರ್ಷದ ಸಾಗರ ಹೆಸರಿನ ಯುವಕ ಫೇಸ್ಬುಕ್ ಮೂಲಕ ಸ್ನೇಹಿತನಾಗಿದ್ದ. ನಂತರ ಫೋನ್ ಮೂಲಕ ಮಾತುಕತೆ ಶುರುವಿಟ್ಟುಕೊಂಡಿದ್ದರು. ಸಾಗರ್ ಮದುವೆ ಪ್ರಸ್ತಾಪ ಮಾಡಿದ್ದರಿಂದ ಆತನ ಮೇಲೆ ಸಂಪೂರ್ಣ ನಂಬಿಕೆ ಬೆಳೆಸಿಕೊಂಡಿದ್ದಳು.
ತನ್ನ ಪಾಲಕರಿಗೆ ಪರಿಚಯಿಸಿ ಕೊಡುವುದಾಗಿ ಹೇಳಿ ಸಂತ್ರಸ್ಥೆಯನ್ನು ಕರೆಯಿಸಿಕೊಂಡಿದ್ದ ಸಾಗರ್, ತನ್ನ ಸ್ನೇಹಿತರ ಜೊತೆ ಆಕೆಯನ್ನು ಕಾಡಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಇದಾದ ಮಾರನೇ ದಿನಕ್ಕೆ ಮಹಿಳೆಯನ್ನು ಸ್ಕ್ರ್ಯಾಪ್ ಡೀಲರ್ ಆಕಾಶ್ ಬಳಿ ಕರೆದೊಯ್ದಿದ್ದಾರೆ. ಇದೇ ವೇಳೆ ಐದು ಮಂದಿಯಿಂದ ಮತ್ತೆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಪದೇಪದೆ ರೇಪ್ನಿಂದಾಗಿ ಮಹಿಳೆಯ ಆರೋಗ್ಯ ಹದಗೆಡುತ್ತಿದ್ದಂತೆ ಐವರು ಆರೋಪಿಗಳು ಆಕೆಯನ್ನು ಬದರ್ಪುರ್ ಗಡಿ ಬಳಿ ಎಸೆದು ಪರಾರಿಯಾಗಿದ್ದಾರೆ.
ಮೇ 12 ರಂದು ಹಾಸ್ಸನ್ಪುರ್ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ದೂರು ದಾಖಲಿಸಿದ್ದಾಳೆ. ನನಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ದೂರು ನೀಡಲು ವಿಳಂಬವಾಯಿತು ಎಂದಿದ್ದಾಳೆ. ದೂರಿನ ಆಧಾರದ ಮೇಲೆ ಶುಕ್ರವಾರ ಸಾಗರ್ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.