ನವದೆಹಲಿ:ಹದಿನೈದು ವರ್ಷದ ಮಗಳು ಹಾಗೂ ಒಂದು ವರ್ಷದ ಮಗುವನ್ನು ತಾಯಿಯೊಬ್ಬಳು ಮಾರಾಟ ಮಾಡಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದ್ದು, 15 ವರ್ಷದ ಹುಡುಗಿಯನ್ನು ರಕ್ಷಿಸಲಾಗಿದೆ ಎಂದು ದೆಹಲಿಯ ಮಹಿಳಾ ಆಯೋಗ ತಿಳಿಸಿದೆ.
ತನ್ನ ಒಂದು ವರ್ಷದ ಸಹೋದರನನ್ನು ಕೂಡಾ ತಾಯಿ ಕಳೆದ ತಿಂಗಳು ಹಣಕ್ಕಾಗಿ ಮಾರಾಟ ಮಾಡಿರುವುದಾಗಿ 15 ವರ್ಷದ ಬಾಲಕಿ ಮಹಿಳಾ ಆಯೋಗಕ್ಕೆ ತಿಳಿಸಿರುವುದಾಗಿ ವರದಿ ಹೇಳಿದೆ.
ನಿಜಾಮುದ್ದೀನ್ ಹೋಟೆಲ್ ಗೆ ಕರೆತಂದು ಬಿಟ್ಟ ತಾಯಿ, ನೀನು ಮತ್ತೊಂದು ಕಡೆ ಹೋಗಬೇಕು ಇಲ್ಲೇ ಇರು ಎಂದು ತಿಳಿಸಿದ್ದರಂತೆ. ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬ ಬಂದು ತನ್ನನ್ನು ಕರೆದೊಯ್ದಿದ್ದ ಎಂದು ಬಾಲಕಿ ವಿವರಿಸಿದ್ದಾಳೆ.
ಆ ವ್ಯಕ್ತಿ ನನ್ನ ಆತನ ಮನೆಗೆ ಕರೆದೊಯ್ದಿದ್ದ, ಆಗ ಅಲ್ಲಿದ್ದ ಇತರೆ ಹುಡುಗಿಯರು ಬಂದು ಕೂಡಲೇ ಮದುವೆ ಡ್ರೆಸ್ ಹಾಕಿಕೊಂಡು ತಯಾರಾಗು ಎಂದು ಹೇಳಿದ್ದರು. ಅಷ್ಟೇ ಅಲ್ಲ ನಿನ್ನ ತಾಯಿ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರು ಎಂದು ದೆಹಲಿ ಮಹಿಳಾ ಆಯೋಗ ಹೇಳಿದೆ.
ತನ್ನನ್ನು ತಾಯಿ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆಂಬ ವಿಷಯ ತಿಳಿದ ಬಾಲಕಿ ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಆಕೆ ಮತ್ತೆ ತನ್ನ ಪ್ರದೇಶಕ್ಕೆ ವಾಪಸ್ ಆಗಿ ಸ್ಥಳೀಯರ ನೆರವು ಕೇಳಿದ್ದವು. ಈ ಸಂದರ್ಭದಲ್ಲಿ ಮಹಿಳಾ ಆಯೋಗಕ್ಕೆ ವಿಷಯ ತಿಳಿಸಿದ್ದರು. ಅವರು ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ವಿಷಯ ತಿಳಿಸಿದ್ದಳು.
ತನ್ನ ತಾಯಿ ಹಾಗೂ ಮಲತಂದೆ, ನಾಲ್ವರು ಸಹೋದರರ ಜತೆಗೆ ವಾಸಿಸುತ್ತಿದ್ದು, ತಾಯಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಮಕ್ಕಳನ್ನು ಮಾರಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.