ಹೊಸದಿಲ್ಲಿ : ಹೆಡ್ ಪೋನ್ ಹಾಕಿಕೊಂಡು ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ 26ರ ಹರೆಯದ ಮಹಿಳೆಯೊಬ್ಬರ ಕಾರಿನಡಿ ಎರಡು ವರ್ಷ ಪ್ರಾಯದ ಗಂಡು ಮಗು ದಾರುಣವಾಗಿ ಬಿದ್ದು ಮೃತಪಟ್ಟ ಘಟನೆಯ ಹೃದಯವಿದ್ರಾವಕ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಈ ದಾರುಣ ಘಟನೆ ಕಳೆದ ಬುಧವಾರ ನೈಋತ್ಯ ದಿಲ್ಲಿಯ ಪಾಲಂ ಪ್ರದೇಶದಲ್ಲಿ ನಡೆದಿದೆ. ಮಗುವಿನ ತಾಯಿ ಪ್ರೀತಿ ಎಂಬಾಕೆ ತನ್ನ ಮನೆಯಲ್ಲಿ ಮಗುವಿಗೆ ಉಣಿಸುತ್ತಿದ್ದಾಗ ಅದು ಒಲ್ಲೆನೆಂದು ರಸ್ತೆಗೆ ಓಡಿ ಬಂದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಮಗು ಕಾರಿನಡಿ ಬಿದ್ದರೂ ಕಾರನ್ನು ನಿಲ್ಲಿಸದೇ ಮಹಿಳೆ ಪರಾರಿಯಾಗಿದ್ದಳು. ಮಗುವಿನ ತಾಯಿ ಕಾರು ನಿಲ್ಲಿಸುವಂತೆ ಬೊಬ್ಬಿಡುತ್ತಾ ಕಾರಿನ ಹಿಂದೆಯೇ ಸ್ವಲ್ಪ ದೂರದ ವರೆಗೂ ಓಡುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿದೆ.
ಮಗುವನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಗುವಿನ ತಾಯಿ ದೂರು ಕೊಟ್ಟಿದಾಳೆ.
“ಕಾರು ಚಲಾಯಿಸುತ್ತಿದ್ದ ಮಹಿಳೆಯು ಹೆಡ್ ಫೋನ್ ಹಾಕಿಕೊಂಡು ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರಿಂದ ಆಕೆಗ ಮಗು ರಸ್ತೆಗೆ ಓಡಿ ಬಂದದ್ದೇ ಕಾಣಿಸಲಿಲ್ಲ; ಮಾತ್ರವಲ್ಲ ನಾನು ಕಾರನ್ನು ನಿಲ್ಲಿಸುವಂತೆ ಬೊಬ್ಬಿಟ್ಟು ಆಕೆಯ ಕಾರಿನ ಕಿಟಕಿ ಗಾಜನ್ನು ಗುದ್ದಿದರೂ ತನ್ನಿಂದ ಅಪಘಾತವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಕೂಡ ಆಕೆ ಸಿದ್ಧಳಿರಲಿಲ್ಲ’ ಎಂದು ಮಗುವಿನ ತಾಯಿ ಪ್ರೀತಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.