ನವದೆಹಲಿ : ಟ್ರಾಫಿಕ್ ಸಿಗ್ನಲ್‌ನಲ್ಲಿ ಮೊಬೈಲ್ ಕಿತ್ತುಕೊಂಡ ಕಳ್ಳರನ್ನು ಹಿಡಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಸ್ಕೂಟರ್ ಮೂಲಕ ರಸ್ತೆಯುದ್ದಕ್ಕೂ ಎಳೆದೊಯ್ದ ಘಟನೆ ಗುರುವಾರ ಸಂಜೆ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಬೆಚ್ಚಿ ಬೀಳಿಸುವಂತಿದೆ.
ಆ ಕ್ಷಣದಲ್ಲಿ ದರೋಡೆಕೋರರು ಪರಾರಿಯಾಗಿದ್ದರೂ, ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ತತ್ ಕ್ಷಣ ಕಾರ್ಯಾಚರಣೆ ನಡೆಸಿ ಅವರಲ್ಲಿ ಒಬ್ಬರನ್ನು ಗುರುತಿಸಿ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಮಾಡೆಲ್ ಟೌನ್‌ನ ಗುರ್ಮಂಡಿ ನಿವಾಸಿ ವಿಪಿನ್ (21) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಪಿನ್ ಹಿಂಬದಿ ಸವಾರಿ ಮಾಡುತ್ತಿದ್ದು, ಮಹಿಳೆ ಕಾರಿನ ಬಳಿ ಬೀಳುವ ಮೊದಲು ಆತನ ಜಾಕೆಟ್ ಅನ್ನು ಹಿಡಿದು 100 ಮೀಟರ್ ಗಳಷ್ಟು ಎಳೆ ತರಲಾಗಿದೆ. ವಾಯುವ್ಯ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಗುರುವಾರ ಸಂಜೆ 5:30 ರ ಸುಮಾರಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ 23 ವರ್ಷದ ಫ್ರಂಟ್ ಆಫೀಸ್ ಅಸಿಸ್ಟೆಂಟ್ ಪಾಯಲ್ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.