ಹೊಸದಿಲ್ಲಿ : “ದಿಲ್ಲಿಯಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮಾತನ್ನು ನಾನು ಕೇಳಿರುತ್ತಿದ್ದರೆ ಜಮ್ಮು ಕಾಶ್ಮೀರದಲ್ಲಿ ಸರಕಾರ ರಚಿಸುವುದಕ್ಕೆ ಸಜ್ಜದ್ ಲೋನ್ ಅವರನ್ನು ನಾನು ಆಹ್ವಾನಿಸಬೇಕಾಗುತ್ತಿತ್ತು” ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಕಳೆದ ವಾರ ಜಮ್ಮು ಕಾಶ್ಮೀರ ವಿಧಾನಸಭೆಯನ್ನು ಹಠಾತ್ ವಿಸರ್ಜಿಸಿದ ಕೆಲವೇ ದಿನಗಳ ಬಳಿಕದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದ ಈ ಹೇಳಿಕೆ ಬಂದಿರುವುದು ರಾಜಕೀಯ ವಲಯಗಳಲ್ಲಿ ಬಿರುಸಿನ ಚರ್ಚೆ, ವಾಗ್ವಾದಕ್ಕೆ ಕಾರಣವಾಗಿದೆ.
“ಜಮ್ಮು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸುವ ಮುನ್ನ ನಾನು ಒಂದೊಮ್ಮೆ ದಿಲ್ಲಿಯತ್ತ ನನ್ನ ನೋಟವನ್ನು ಹರಿಸಿದ್ದರೆ, ಸರಕಾರ ರಚಿಸುವಂತೆ ನಾನು ಸಜ್ಜದ್ ಲೋನ್ ಅವರನ್ನು ಆಹ್ವಾನಿಸಬೇಕಾಗುತ್ತಿತ್ತು. ಆದರೆ ನಾನೊಬ್ಬ ಅಪ್ರಾಮಾಣಿಕ ಮನುಷ್ಯನಾಗಿ ಇತಿಹಾಸ ಸೇರುವುದನ್ನು ಇಷ್ಟಪಡಲಲ್ಲ. ಈಗ ನನ್ನ ವಿರುದ್ಧ ವ್ಯಕ್ತವಾಗುತ್ತಿರುವ ಯಾವುದೇ ರೀತಿಯ ಟೀಕೆ, ಖಂಡನೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದರು.
ಕಳೆದ ವಾರ ಅತ್ಯಂತ ನಾಟಕೀಯ ವಿದ್ಯಮಾನದಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ತಾನು ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಜತೆಗೂಡಿ ಜಮ್ಮು ಕಾಶ್ಮೀರದಲ್ಲಿ ಹೊಸ ಸರಕಾರ ರಚಿಸುವುದಕ್ಕೆ ತನಗೆ ಅವಕಾಶ ಕೊಡಬೇಕು ಎಂದು ರಾಜ್ಯಪಾಲರನ್ನು ಕೋರಿದ್ದರು.
ಆದರೆ ಇದೊಂದು ಅಪವಿತ್ರ ಮೈತ್ರಿಯಾಗಿದ್ದು ಇದರಿಂದ ಭಾರೀ ಪ್ರಮಾಣದಲ್ಲಿ ಕುದುರೆ ವ್ಯಾಪಾರಕ್ಕೆ, ಹಣ ಹಸ್ತಾಂತರಕ್ಕೆ ಕಾರಣವಾಗಲಿದೆ ಎಂದು ಹೇಳಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು.