ಹೊಸದಿಲ್ಲಿ: ಬೆಂಗಳೂರಿನಲ್ಲಿ ಮಾರ್ಚ್ 15ರಿಂದ ಮೂರು ದಿನಗಳ ಕಾಲ ನಡೆಯಲಿರುವ ಆರೆಸ್ಸೆಸ್ ಪ್ರತಿನಿಧಿ ಸಭಾದ ಸಭೆಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮುಗಲಭೆ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರಧಾನವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.
ಆರೆಸ್ಸೆಸ್‌ನ ಆಡಳಿತ ಮಂಡಳಿಯಾಗಿರುವ ಅಖೀಲ ಭಾರತೀಯ ಪ್ರತಿನಿಧಿ ಸಭಾದ ವಾರ್ಷಿಕ ಸಭೆ ಮಾ.15ರಿಂದ 17ರ ವರೆಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಪ್ರತೀ ವರ್ಷ ನಡೆಯುವ ಈ ಸಭೆಯಲ್ಲಿ ಸಂಘ ಮತ್ತು ದೇಶಕ್ಕೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಜತೆಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಮುಖ್ಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ವೇಳೆ ನಡೆಯುವ ಗೋಷ್ಠಿಗಳಲ್ಲಿ ದಿಲ್ಲಿ ಹಿಂಸಾಚಾರ ಮತ್ತು ಸಿಎಎ ವಿರುದ್ಧ ನಡೆ ಯುತ್ತಿರುವ ಪ್ರತಿಭಟನೆಗಳ ಬಗ್ಗೆ ತೀವ್ರ ಸ್ವರೂಪದ ಚರ್ಚೆ ನಡೆಯಲಿದೆ.
ದಿಲ್ಲಿ ಹಿಂಸಾಚಾರ ಕುರಿತು ಸಂಪೂರ್ಣ ಮಾಹಿತಿ ಒಳಗೊಂಡ ವರದಿಯೊಂದಿಗೆ ಸಭೆಗೆ ಹಾಜರಾಗುವಂತೆ ಸಂಘದ ದಿಲ್ಲಿ ಘಟಕದ ಪ್ರತಿನಿಧಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ಸಂಘದ ಅಸ್ತಿತ್ವವನ್ನು ವಿಸ್ತರಿಸುವ ಬಗ್ಗೆಯೂ ಸಭೆ ಗಮನಹರಿಸಲಿದೆ. ಸಂಘದ ಕಾರ್ಯಚಟುವಟಿಕೆಗಳು ಇದುವರೆಗೂ ತಲುಪದೆ ಇರುವಂತಹ ಪ್ರದೇಶಗಳು ಮತ್ತು ಜನರ ಬಳಿ ಆರೆಸ್ಸೆಸ್ ಅನ್ನು ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಯಲಿದೆ. ಆ ನಿಟ್ಟಿನಲ್ಲಿ ಆರೆಸ್ಸೆಸ್ ಶಾಖೆಗಳ ಸಂಖ್ಯೆ ಮತ್ತು ತರಬೇತಿ ಶಿಬಿರಗಳ ಸಂಖ್ಯೆ ಹೆಚ್ಚಿಸುವ ಕುರಿತಂತೆ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ದೇಶದ ವಿವಿಧ ಘಟಕಗಳ 1,400ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.