ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯ ಜನರ ದಶಕಗಳ ರೈಲ್ವೆ ಕನಸು ನನಸಾಯಿತೆಂದು ಸಂಭ್ರಮಿಸುತ್ತಿರುವಾಗಲೇ ರೈಲ್ವೆ ಇಲಾಖೆ ನಿರಾಸೆ ಮೂಡಿಸುವ ಪ್ರಕಟಣೆ ಹೊರಡಿಸಿದೆ. ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಯಶವಂತಪುರ-ದೆಹಲಿಯ ನಿಜಾಮುದ್ದೀನ್ ನಿಲ್ದಾಣದ ನಡುವೆ ಸಂಚರಿಸುವ 06521 ಹಾಗೂ 06522 ಸಂಖ್ಯೆಯ ರೈಲಿನ ಪ್ರಯಾಣವನ್ನು ಮುಂದಿನ ಮೂರು ಜೋಡಿ ಸಂಚಾರಕ್ಕೆ ಮಿತಿಗೊಳಿಸಲಾಗಿದೆ ಎಂದು ರೈಲ್ವೆ ಡಿವಿಜನಲ್ ಮ್ಯಾನೇಜರ್ ಟ್ವೀಟ್ ಮಾಡುವ ಮೂಲಕ ಪ್ರಕಟಿಸಿದ್ದಾರೆ.
2019 ಮಾರ್ಚ್11 ರಂದು ಸಂಜೆ 7.35ಕ್ಕೆ ತಮ್ಮದೇ ಖಾತೆಯ ಮೂಲಕ ಟ್ವೀಟ್ ಮಾಡಿರುವ ಅವರು, ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ 06521 ಸಂಖ್ಯೆಯ ರೆÌಲು ಸಂಚಾರವನ್ನು ಮಾ.14, 21ಮತ್ತು 28ಕ್ಕೆ ಯಶವಂತಪುರದಿಂದ ದೆಹಲಿ ನಿಜಾಮುದ್ದೀನ್ ನಿಲ್ದಾಣಕ್ಕೆ ತೆರಳಲಿದೆ. ಹಾಗೆಯೇ 06522 ಸಂಖ್ಯೆಯ ರೈಲು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಕ್ರಮವಾಗಿ ಮಾ.18, 25 ಹಾಗೂ ಏ.1 ರಂದು ಸಂಚಾರಕ್ಕೆ ಮಾತ್ರ ಮಿತಿಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಮಾ.5 ರಂದು ಆರಂಭ: 2019 ಮಾ.5 ರಂದು ಯಶವಂತಪುರದಿಂದ ಆರಂಭವಾಗಿದ್ದ ಈ ರೈಲ್ವೆ ಸಂಚಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಹಸಿರು ನಿಶಾನೆ ತೋರಿದ್ದರು. ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಕೆ.ಎಚ್. ಮುನಿಯಪ್ಪ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಪ್ರತಿ ನಿಲ್ದಾಣಕ್ಕೆ ಇದೇ ರೈಲಿನಲ್ಲಿ ಆಗಮಿಸಿ ಸ್ವಾಗತಿಸಿ ಸಂಭ್ರಮಿಸಿದ್ದರು. ಈ ರೈಲು ಸಂಚಾರ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಯಾಣಿಕರನ್ನು ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಉತ್ತರ ಭಾಗದ ರಾಜ್ಯಗಳ ಮೂಲಕ ದೆಹಲಿಗೆ ಪ್ರಯಾಣಿಕರು ಅನುಕೂಲವಾಗಿದೆ ಎಂದು ಬಣ್ಣಿಸಿದ್ದರು.
ಸಂಭ್ರಮಕ್ಕೆ ಕಾರಣ: ಕೋಲಾರ, ಚಿಕ್ಕಬಳ್ಳಾಪುರದಿಂದ ತಿರುಪತಿಗೆ ಸಂಚರಿಸುವ ಅಸಂಖ್ಯಾತ ಭಕ್ತರು ಇದೇ ರೈಲಿನ ಮೂಲಕ ಕಡಿಮೆ ದರದಲ್ಲಿ ಆಂಧ್ರಪ್ರದೇಶದ ರೇಣುಗುಂಟ ನಿಲ್ದಾಣದವರೆಗೂ ಸಂಚರಿಸಿ ಅಲ್ಲಿಂದ ತಿರುಪತಿ, ತಿರುಮಲ ದರ್ಶನಕ್ಕೆ ತೆರಳಬಹುದು ಎಂದು ಹೇಳಲಾಗಿತ್ತು. ಇದೇ ರೈಲಿನ ಆರಂಭಿಕ ಕೊಡುಗೆಯಾಗಿ ಕೋಲಾರದ ಕಾಂಗ್ರೆಸ್ ಮುಖಂಡರು ಮೊದಲ ರೈಲಿನಲ್ಲಿ ಕೋಲಾರದಿಂದ ರೇಣುಗುಂಟ ನಿಲ್ದಾಣಕ್ಕೆ ತೆರಳುವ ಯಾತ್ರಿಕರಿಗೆ ಉಚಿತವಾಗಿಯೇ ಟಿಕೆಟ್ ಖರೀದಿಸಿ ಕೊಟ್ಟಿದ್ದರು. ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣವಾಗಿದ್ದ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ ಯಶವಂತಪುರದಿಂದ ದೆಹಲಿಗೆ ತೆರಳಲಿದೆಯೆಂದು ಹೇಳಲಾಗಿತ್ತು.
ನಿರಾಸೆಗೆ ಕಾರಣ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಕ್ಕೆ ಸಜ್ಜಾಗುತ್ತಿರುವಾಗಲೇ, ರೈಲನ್ನು ಜೂ.24ರವರೆಗೂ ತಾತ್ಕಾಲಿಕ ಸಂಚಾರಕ್ಕೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಆನಂತರ ಈ ಮಾರ್ಗದ ಆದಾಯವನ್ನು ಪರಿಶೀಲಿಸಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆಯ ಪ್ರಕಟಣೆಯು ತಿಳಿಸಿತ್ತು.
ಕೋಲಾರ, ಚಿಕ್ಕಬಳ್ಳಾಪುರ ಮಾರ್ಗದಲ್ಲಿ ದೆಹಲಿಯವರೆಗೂ ತೆರಳಬಹುದು ಎನ್ನುವುದು ಜೋಡಿ ಜಿಲ್ಲೆಯ ಪ್ರಯಾಣಿಕರ ಪುಳಕಕ್ಕೆ ಕಾರಣವಾಗಿತ್ತು. ಆದರೆ, ಈ ರೈಲು ಪ್ರಯಾಣವನ್ನು ಕೇವಲ ಏ.1ರವರೆಗೂ ಕೇವಲ ಮೂರು ಬಾರಿ ಸಂಚಾರಕ್ಕೆ ಮಿತಿಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಡಿಆರ್‌ಎಂ ಟ್ವೀಟ್ ಮೂಲಕ ಪ್ರಕಟಿಸಿರುವುದು ಜನರ ನಿರಾಸೆಗೆ ಕಾರಣವಾಗಿದೆ.
ಕೆ.ಎಚ್‌ಗೆ ಹಿನ್ನಡೆ: 7 ಬಾರಿ ಸಂಸದರಾಗಿ, ಎರಡು ಬಾರಿ ಕೇಂದ್ರ ರಾಜ್ಯ ಸಚಿವರಾಗಿ ಮೂರು ಇಲಾಖೆಗಳಲ್ಲಿ ಕೆಲಸ ಮಾಡಿದ್ದ ಕೆ.ಎಚ್.ಮುನಿಯಪ್ಪರ ಕೊಡುಗೆ ಏನು ಎಂದು ಪ್ರಶ್ನಿಸಲಾಗುತ್ತಿದೆ. ಇದಕ್ಕೆ ಉತ್ತರ ಎನ್ನುವಂತೆ ಚುನಾವಣೆ ಸನಿಹದಲ್ಲಿಯೇ ಯಶವಂತಪುರ-ದೆಹಲಿ ನಡುವೆ ರೈಲು ಸಂಚಾರ ಆರಂಭವಾಗಿದ್ದು, ಅವರ ವಿರೋಧಿಗಳ ಬಾಯಿ ಮುಚ್ಚಿಸಲು ಕಾರಣವಾಗಿತ್ತು.
ಆದರೆ, ರೈಲ್ವೆ ಇಲಾಖೆಯ ಅಧಿಕಾರಿಗಳು ಇದೀಗ ದಿಢೀರ್ ನಿರ್ಧಾರದಲ್ಲಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ರೈಲು ಸಂಚಾರವನ್ನು ಕೇವಲ ಮೂರು ಸಂಚಾರಕ್ಕೆ ಮಿತಿಗೊಳಿಸಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೂ ಕಾರಣವಾಗಿದೆ. ರೈಲ್ವೆ ಇಲಾಖೆಯು ಕೊಟ್ಟಂತೆ ಕೊಟ್ಟು ರೈಲು ಸೇವೆಯನ್ನು ಹಿಂದಕ್ಕೆ ಪಡೆಯುತ್ತಿರುವುದರ ಹಿಂದೆ ರಾಜಕೀಯ ಕಾರಣಗಳು ಇರಬಹುದು ಎನ್ನುವ ಟೀಕೆಯೂ ಕೇಳಿ ಬರುತ್ತಿದೆ.
* ಕೆ.ಎಸ್.ಗಣೇಶ್