ಹೊಸದಿಲ್ಲಿ: ದಿಲ್ಲಿಯಲ್ಲಿ ಹಾಲಿ ಸಾಲಿನ ಗರಿಷ್ಠ ತಾಪಮಾನ ಮಂಗಳವಾರ ಕೂಡ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರವೇ ಮುಂದಿನ 5 ದಿನಗಳ ಬಿಸಿಯ ಗಾಳಿಯ ಅಲರ್ಟ್ ಅನ್ನು ಭಾರ ತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಜೂ. 30ರವರೆಗೆ ಖಾಸಗಿ ಶಾಲೆಗಳಿಗೆ ರಜೆ ನೀಡಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಬೇಸಗೆ ರಜೆ ಆದೇಶ ನೀಡಿದರೂ, ಕೆಲವೊಂದು ಖಾಸಗಿ ಶಾಲೆಗಳಲ್ಲಿ ತರಗತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಈ ನಡುವೆ, ಹೊಸದಿಲ್ಲಿಯಲ್ಲಿ ಸೋಮವಾರ ಕೂಡ ದಿನದ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿಯೇ ಮುಂದುವರಿದಿದೆ. ನಜಾಫ್ಗಢದಲ್ಲಿ 47.4 ಡಿಗ್ರಿ ಸೆಲ್ಸಿಯಸ್ , ಮುಂಗೇಶ್‌ಪುರದಲ್ಲಿ 47.1, ಆಯಾ ನಗರದಲ್ಲಿ 45.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖ ಲಾಗಿದೆ. ಸಾಮಾನ್ಯ ತಾಪಮಾನ 3.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿದ್ಯುತ್ ಬಳಕೆಯಲ್ಲಿ ಭಾರಿ ಏರಿಕೆ: ಬಿಸಿ ಗಾಳಿ ಮತ್ತು ತಾಪ ಮಾನ ದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ದಿಲ್ಲಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ವಿದ್ಯುತ್ ಇಲಾಖೆ ನೀಡಿದ ಮಾಹಿತಿ ಪ್ರಕಾರ ಸೋಮವಾರದ ವರೆಗೆ 7557 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಮೇ ತಿಂಗಳಿಗೆ ಸಂಬಂಧಿಸಿದಂತೆ ಇದು ಅತ್ಯಧಿಕ ವಿದ್ಯುತ್ ಬಳಕೆ. ಕಳೆದ ವರ್ಷದ ಆ.22ರಂದು 7438 ಮೆ.ವ್ಯಾ. ವಿದ್ಯುತ್ ಬಳಕೆಯಾಗಿತ್ತು. 2022 ಜೂ.29ರಂದು ದಿಲ್ಲಿಯಲ್ಲಿ 7695 ಮೆ.ವ್ಯಾ. ವಿದ್ಯುತ್ ಬಳಕೆಯಾಗಿದ್ದು ಇದುವರೆಗಿನ ದಾಖಲೆ.
ಕೇರಳದಲ್ಲಿ ಮಳೆ: ಒಬ್ಬ ನೀರು ಪಾಲು
ತಿರುವನಂತಪುರ: ಮಾಸಾಂತ್ಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ನವೇ ಮಳೆ ಬಿರುಸಾಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬಿಹಾರ ಮೂಲದ ಕಾರ್ಮಿಕ ನೀರುಪಾಲಾಗಿದ್ದಾನೆ. ಪ್ರವಾಹ ಉಂಟಾಗಿದ್ದರೂ ನದಿ ಯಲ್ಲಿ ಈಜಲು ಹೋಗಿದ್ದೇ ಘಟನೆಗೆ ಕಾರಣ. ಇಡುಕ್ಕಿ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರಿಗೆ ಗಾಯಗಳಾಗಿವೆ. ಆಲಪ್ಪುಳ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾ ಗಿದೆ. ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ದಲ್ಲಿ ವ್ಯತ್ಯಯವಾಗಿದೆ.