ಮುಂಬಯಿ: ಇತ್ತೀಚೆಗೆ ದಿಲ್ಲಿಯ ಸುಲ್ತಾನ್ ಪುರಿಯಲ್ಲಿ ನಡೆದ ಪ್ರಕರಣದಲ್ಲಿ ಮೃತಪಟ್ಟ ಅಂಜಲಿ ಸಿಂಗ್ ಕುಟುಂಬಕ್ಕೆ ಶಾರುಖ್ ಖಾನ್ ಅವರ ಎನ್ ಜಿಒ ಆರ್ಥಿಕ ಸಹಾಯ ದಾನ ನೀಡಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಮೀರ್ ಫೌಂಡೇಶನ್ ಮೂಲಕ ಹತ್ತಾರು ಕೆಲಸ – ಕಾರ್ಯಗಳನ್ನು ಮಾಡಿದ್ದು, ಸುಲ್ತಾನ್ ಪುರಿಯಲ್ಲಿ ಘಟನೆಯಲ್ಲಿ ಮೃತಪಟ್ಟ ಅಂಜಲಿ ಅವರ ಕುಟುಂಬಕ್ಕೆ ಆರ್ಥಿಕವಾಗಿ ಜೊತೆನಿಂತು ಮಾನವೀಯತೆ ಮೆರದಿದೆ.
ಅಂಜಲಿ ಅವರು ಕುಟುಂಬದ ಹಿರಿ ಮಗಳಾಗಿದ್ದರು. ತಾಯಿ ಆರೋಗ್ಯ ಸಮಸ್ಯೆಯಿಂದ ಬೆಡ್ ರೆಸ್ಟ್ ನಲ್ಲೇ ಇದ್ದಾರೆ. ಇನ್ನಿಬ್ಬರು ಮಕ್ಕಳದು ದುಡಿಯುವ ವಯಸ್ಸಲ್ಲ. ಎಲ್ಲವನ್ನೂ ಮಗಳೇ ನೋಡಿಕೊಳ್ಳಬೇಕಿತ್ತು. ಕುಟುಂಬದ ಈ ಪರಿಸ್ಥಿತಿಯನ್ನು ಅರಿತ ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಹಣಕಾಸಿನ ನೆರವನ್ನು ನೀಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬಡತನದಿಂದ 10ನೇ ಕ್ಲಾಸ್ ಬಿಟ್ಟು ಮನೆ ಕೆಲಸ, ಬೀಡಿ ರೋಲ್ ಮಾಡುತ್ತಿದ್ದ ಕೇರಳದ ವ್ಯಕ್ತಿ ಇಂದು ಅಮೆರಿಕಾದಲ್ಲಿ ನ್ಯಾಯಾಧೀಶ
ಘಟನೆ ಹಿನ್ನೆಲೆ: ರವಿವಾರ (ಜ.1 ರಂದು) ಮುಂಜಾನೆ 3 ಗಂಟೆ ಸುಮಾರಿಗೆ ಸುಲ್ತಾನ್‌ಪುರಿಯಲ್ಲಿ ಅಪಘಾತ ನಡೆದು, ಸ್ಕೂಟಿ ಚಲಾಯಿಸುತ್ತಿದ್ದ 20ರ ಯುವತಿ ಅಂಜಲಿ ಸಾವಿಗೀಡಾಗಿದ್ದರು. ಸ್ಕೂಟಿಯೊಂದಿಗೆ ಕೆಳಗೆ ಬಿದ್ದ ಅಂಜಲಿಯ ಕಾಲುಗಳು ಕಾರಿನ ತಳಭಾಗಕ್ಕೆ ಸಿಲುಕಿಕೊಂಡ ಕಾರಣ, 12 ಕಿ.ಮೀ. ದೂರದ ವರೆಗೂ ಅಂಜಲಿ ಎಳೆಯಲ್ಪಟ್ಟಿದ್ದರು. ಕಂಜಾವಾಲ ಪ್ರದೇಶದಲ್ಲಿ ಬಟ್ಟೆಗಳಿಲ್ಲದೇ ಮೃತದೇಹ ಪತ್ತೆಯಾಗಿತ್ತು. ಕಾರಿನಲ್ಲಿ ಆರೋಪಿಗಳು ದೊಡ್ಡ ಧ್ವನಿಯಲ್ಲಿ ಸಂಗೀತ ಹಾಕಿಕೊಂಡಿದ್ದರು. ಹೀಗಾಗಿ ಕಾರಿನಡಿ ಸಿಲುಕಿದ್ದ ಅಂಜಲಿ ಜೋರಾಗಿ ಕಿರುಚಿತ್ತಿದ್ದರೂ ಆರೋಪಿಗಳಿಗೆ ಕೇಳಿಸಿರಲಿಲ್ಲ.
ಈ ಸಂಬಂಧ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2020 ರಲ್ಲಿ ತಾಯಿಯನ್ನು ಕಳೆದುಕೊಂಡ ಮಗುವಿಗೆ ಸಹಾಯ ಮಾಡಲು ಮೀರ್ ಫೌಂಡೇಶನ್ ಮುಂದೆ ಬಂದಿತ್ತು.