ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶನಿವಾರ(ಮೇ 29) 956 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದೆ. ರಾಜಧಾನಿಯಲ್ಲಿ ಕೋವಿಡ್ ಎರಡನೇ ಅಲೆ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಒಂದು ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧನ ಪತ್ನಿ ನಿತಿಕಾ ಕೌಲ್ ಭಾರತೀಯ ಸೇನೆಗೆ ಸೇರ್ಪಡೆ
ದೆಹಲಿಯಲ್ಲಿ ಕೋವಿಡ್ 19 ಪ್ರಕರಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ ಹೆಚ್ಚು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮೇ 31ರಿಂದ ಲಾಕ್ ಡೌನ್ ಅನ್ನು ಹಂತ, ಹಂತವಾಗಿ ಸಡಿಲಿಕೆ ಮಾಡಲಾಗುವುದು, ಅಲ್ಲದೇ ಎರಡು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದರು.
ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವಂತೆಯೇ ಹಂತ, ಹಂತವಾಗಿ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸುವ ಮೂಲಕ ವ್ಯಾಪಾರ, ವಹಿವಾಟುಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದರು.
ರಾಜಧಾನಿಯಲ್ಲಿ ಆರ್ಥಿಕ ಚಟುವಟಿಕೆ ಮೊದಲಿನಂತೆ ಪುನರಾರಂಭಗೊಳ್ಳಬೇಕು. ಆ ನಿಟ್ಟಿನಲ್ಲಿ ಆರು ವಾರಕ್ಕಿಂತಲೂ ಹೆಚ್ಚು ಕಾಲದ ಲಾಕ್ ಡೌನ್ ನಂತರ ನಿಧಾನಕ್ಕೆ ಲಾಕ್ ಡೌನ್ ನಿರ್ಬಂಧವನ್ನು ಸಡಿಲಿಕೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.