ಹೊಸದಿಲ್ಲಿ: ದೆಹಲಿಯ ಕಲ್ಕಾಜಿ ಕ್ಷೇತ್ರದಲ್ಲಿ ತಾನು ಗೆದ್ದರೆ ಕ್ಷೇತ್ರದ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ ನುಣುಪಾಗಿಸುತ್ತೇನೆ ಎಂದು ಹೇಳಿ ಬಿಜೆಪಿ ಶಾಸಕ ರಮೇಶ್ ಬಿಧುರಿ ಭಾನುವಾರ (ಜ.05) ವಿವಾದಕ್ಕೆ ಸಿಲುಕಿದ್ದಾರೆ.
ಬಿಜೆಪಿಯನ್ನು “ಮಹಿಳಾ ವಿರೋಧಿ ಪಕ್ಷ” ಎಂದು ಕರೆದಿರುವ ಕಾಂಗ್ರೆಸ್, ಬಿಧುರಿ ಮಾಡಿದ ಹೇಳಿಕೆಗಳು “ನಾಚಿಕೆಗೇಡಿನವು” ಮತ್ತು ಮಹಿಳೆಯರ ವಿಷಯದಲ್ಲಿ ಅವರ “ಕೊಳಕು” ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಇದು ಬಿಜೆಪಿಯ ನಿಜವಾದ ಮುಖ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಹೇಳಿದ್ದಾರೆ.
ಬಿಧುರಿ ಮಾತ್ರವಲ್ಲದೆ ಬಿಜೆಪಿಯ ಉನ್ನತ ನಾಯಕತ್ವವೂ “ಕೈಗಳನ್ನು ಮುಗಿದು ಪ್ರಿಯಾಂಕಾ ಗಾಂಧಿಯವರಲ್ಲಿ ಕ್ಷಮೆ ಕೇಳಬೇಕು” ಎಂದು ಶ್ರೀನಾತೆ ಒತ್ತಾಯಿಸಿದರು.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಧುರಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರು ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಕಾಂಗ್ರೆಸ್ನ ಅಲ್ಕಾ ಲಂಬಾ ವಿರುದ್ಧ ಸ್ಪರ್ಧಿಸಿದ್ದಾರೆ.
ಬಿಧುರಿಯವರ ಹೇಳಿಕೆಗಳು ಆಮ್ ಆದ್ಮಿ ಪಕ್ಷದಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ, “ಇವರು ಬಿಜೆಪಿಯ ಅಭ್ಯರ್ಥಿ, ಅವರ ಭಾಷೆಯನ್ನು ಆಲಿಸಿ, ಇದು ಮಹಿಳೆಯರಿಗೆ ಬಿಜೆಪಿ ನೀಡುವ ಗೌರವವಾಗಿದೆ. ದೆಹಲಿಯ ಮಹಿಳೆಯರ ಗೌರವವು ಅಂತಹ ನಾಯಕರ ಕೈಯಲ್ಲಿ ಸುರಕ್ಷಿತವಾಗಿದೆಯೇ?” ಎಂದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಧುರಿ ಅವರು ಈ ಹೇಳಿಕೆಗಳನ್ನು ನೀಡಿರುವುದನ್ನು ಖಚಿತಪಡಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ನಯವಾಗಿಸುತ್ತೇನೆ ಎಂದು ಒಮ್ಮೆ ಹೇಳಿದರು ಎಂದು ಅವರು ಉಲ್ಲೇಖಿಸಿದರು.