ನವದೆಹಲಿ:ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿಯ ಪಿಎಚ್ ಡಿ ವಿದ್ಯಾರ್ಥಿ, ಆರೋಪಿ ಮೀರಾನ್ ಹೈದರ್ ಹಲವಾರು ಕಟು ಸತ್ಯವನ್ನು ಬಹಿರಂಗಗೊಳಿಸಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಜನತಾ ದಳದ ದಿಲ್ಲಿ ಯುವ ಘಟಕದ ಅಧ್ಯಕ್ಷನಾಗಿರುವ ಮೀರಾನ್ ಹೈದರ್ ದಿಲ್ಲಿ ಗಲಭೆ ಕುರಿತು ತನಿಖಾಧಿಕಾರಿಗಳ ಮುಂದೆ, ಜಾಮೀಯಾ ಹಿಂಸಾಚಾರದ ನಂತರ ದೆಹಲಿ ಗಲಭೆ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದ್ದಾನೆ.
ಫೆಬ್ರುವರಿ ತಿಂಗಳಿನಲ್ಲಿ ದಿಲ್ಲಿಯಲ್ಲಿ ನಡೆದ ಭಾರೀ ದೊಡ್ಡ ಪ್ರಮಾಣದ ಕೋಮು ಹಿಂಸಾಚಾರ ಪ್ರಕರಣದ ಸಂಚಿನ ಆರೋಪದಲ್ಲಿ ದಿಲ್ಲಿ ಪೊಲೀಸರು ಮೀರಾನ್ ಹೈದರ್ ನನ್ನು ಮೊದಲು ಬಂಧಿಸಿರುವುದಾಗಿ ವರದಿ ಹೇಳಿದೆ.
ಜಾಮೀಯಾ ಯೂನಿರ್ವಸಿಟಿ ಆವರಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ದೆಹಲಿ ಗಲಭೆ ಸಂಚನ್ನು ರೂಪಿಸಲಾಗಿತ್ತು ಎಂದು ಮೀರಾನ್ ದೆಹಲಿ ಪೊಲೀಸರ ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಪೂರ್ವ ಯೋಜನೆಯಂತೆ ಆರೋಪಿ ಮೀರಾನ್ ಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಜನರನ್ನು ಸೇರಿಸುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾನೆ. ದೆಹಲಿಯಲ್ಲಿ ಕೋಮು ಗಲಭೆಯ ಕಿಚ್ಚು ಹಚ್ಚಿಸಲು ಪಿಎಫ್ ಐ ಹಣಕಾಸಿನ ನೆರವು ನೀಡಿತ್ತು. ಅಲ್ಲದೇ ಪ್ರತಿಭಟನೆ ವೇಳೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬ್ಯಾನರ್ ಹಿಡಿದುಕೊಂಡಿರುವುದಾಗಿ ಹೇಳಿದ್ದ. ಗಲಭೆ ನಡೆಸಲು ಹೈದರ್ ಐದು ಲಕ್ಷ ರೂಪಾಯಿ ಹಣ ಸಂಗ್ರಹಿಸಿರುವುದಾಗಿ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಝಫರಾಬಾದ್ ಮತ್ತು ಸೀಲಂಪುರ್ ಪ್ರದೇಶದಲ್ಲಿ ಮೊದಲು ಗಲಭೆ ಆರಂಭಿಸಲಾಗಿತ್ತು. ಬಳಿಕ ಮೀರಾನ್ ಮತ್ತು ಇತರರು ಪೆಟ್ರೋಲ್ ಹಾಗೂ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ.
ದಿಲ್ಲಿಯಲ್ಲಿ ಗಲಭೆ ನಡೆಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಪ್ರಕರಣದಲ್ಲಿ ಮೀರಾನ್ ನನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
(ಸುದ್ದಿಮೂಲ: ಜೀ ನ್ಯೂಸ್ ಇಂಗ್ಲಿಷ್)