ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶುಕ್ರವಾರ 165 ಕೋವಿಡ್ 19 ಪ್ರಕರಣ ವರದಿಯಾಗಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,445ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ:ಜಮ್ಮ, ಕಾಶ್ಮೀರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ..!
ದೆಹಲಿಯಲ್ಲಿ ಈವರೆಗೆ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 14,32,033ರಷ್ಟು ವರದಿಯಾಗಿತ್ತು. ಅಲ್ಲದೇ ಕೋವಿಡ್ ನಿಂದ 24,900 ಮಂದಿ ಸಾವನ್ನಪ್ಪಿದ್ದರು. ರಾಷ್ಟ್ರರಾಜಧಾನಿಯಲ್ಲಿ ಈಗ ಪಾಸಿಟಿವಿಟಿ ದರ 0.22ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಕಳೆದ 24ಗಂಟೆಯಲ್ಲಿ 260 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಒಟ್ಟು ಈವರೆಗೆ ಗುಣಮುಖರಾದವರ ಸಂಖ್ಯೆ 14,04,688 ಮಂದಿ. ಚೇತರಿಕೆಯ ಪ್ರಮಾಣ ಶೇ.98.1ರಷ್ಟಿರುವುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದೆ.
ದೆಹಲಿಯಲ್ಲಿ ಪ್ರಸ್ತುತ 5,452 ಕೋವಿಡ್ ಸೋಂಕಿನ ಕಂಟೈನ್ ಮೆಂಟ್ ವಲಯಗಳಿವೆ. ಏತನ್ಮಧ್ಯೆ ಸಂಭಾವ್ಯ 3ನೇ ಕೋವಿಡ್ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.