ನವದೆಹಲಿ:“ನಿಮಗೆ ರೈಲ್ವೆಯಲ್ಲಿ ಕೆಲಸ ಕೊಡಿಸುತ್ತೇವೆ. ತರಬೇತಿಯ ಭಾಗವಾಗಿ ನವದೆಹಲಿ ನಿಲ್ದಾಣದಲ್ಲಿ ಹೋಗುವ ಮತ್ತು ಬರುವ ರೈಲುಗಳ ಹಾಗೂ ಅವುಗಳ ಬೋಗಿಗಳನ್ನು ಎಣಿಸುತ್ತಾ ಇರಬೇಕು’.
ಇದು ರೈಲ್ವೇ ಇಲಾಖೆಯ ಉದ್ಯೋಗದ ಜಾಹೀರಾತಿನ ಭಾಗ ಅಲ್ಲ. ಅಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ವಂಚಿಸಿದ ಕಿಡಿಗೇಡಿಗಳ ನಯವಾದ ಜಾಲವಿದು.
ಇಂಥ ಸವಿಮಾತುಗಳಿಗೆ ತಮಿಳುನಾಡಿನ 28 ಯುವಕರು ಬಲಿಯಾಗಿದ್ದಾರೆ. ಜತೆಗೆ 2.67 ಕೋಟಿ ರೂ. ಕಳೆದುಕೊಂಡಿದ್ದಾರೆ. ರೈಲ್ವೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ನಂಬಿದ್ದ ಯುವಕರು, ವಂಚಕರ ಆದೇಶದಂತೆ ದೆಹಲಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಪ್ರತಿ ದಿನ 8 ಗಂಟೆಗಳ ಕಾಲ ಹೋಗಿ-ಬರುವ ರೈಲುಗಳನ್ನು ಹಾಗೂ ಅವುಗಳ ಕೋಚ್‌ಗಳನ್ನು ಎಣಿಸುತ್ತಿದ್ದರು. ಬರೋಬ್ಬರಿ ಒಂದು ತಿಂಗಳ ಕಾಲ ಈ ಕೆಲಸ ಮಾಡಿದ ಬಳಿಕ, ಅವರಿಗೆ ಅನುಮಾನ ಬಂದಿದೆ.
ರೈಲ್ವೆ ಟಿಕೆಟ್ ಪರಿವೀಕ್ಷಕರ ಹುದ್ದೆ (ಟಿಟಿಇ), ಸಂಚಾರ ಸಹಾಯಕ ಮತ್ತು ಕ್ಲರ್ಕ್‌ಗಳ ಹುದ್ದೆಗಳಿಗೆ ನೇಮಕ ಆಗುವವರಿಗೆ ಇಂಥ ತರಬೇತಿ ಬೇಕಾಗುತ್ತದೆ ಎಂದು ವಂಚಕರು ಅಭ್ಯರ್ಥಿಗಳನ್ನು ನಂಬಿಸಿದ್ದರು.
ಉದ್ಯೋಗಾಕಾಂಕ್ಷಿಗಳಿಂದ 2 ಲಕ್ಷ ರೂ.ಗಳಿಂದ 24 ಲಕ್ಷ ರೂ.ಗಳವರೆಗೆ ದುಡ್ಡು ವಸೂಲಿ ಮಾಡಿದ್ದರು ಎಂದು 78 ವರ್ಷದ ನಿವೃತ್ತ ಯೋಧ ಎಂ.ಸುಬ್ಬು ಸ್ವಾಮಿ ದೆಹಲಿ ಪೊಲೀಸ್ ಇಲಾಖೆಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಆರೋಪಿಸಿದ್ದಾರೆ. ವಿಶೇಷವೆಂದರೆ, ವಂಚನೆಗೊಳಗಾದ 28 ಮಂದಿಗೆ ಮೊದಲು ಈ ವಂಚಕರನ್ನು ಸಂಪರ್ಕಿಸಿ ಕೊಟ್ಟಿದ್ದೇ ಈ ಸುಬ್ಬುಸ್ವಾಮಿ. ಆದರೆ, ನನಗೆ ಈ ಮೋಸದ ಬಗ್ಗೆ ಅರಿವಿರಲಿಲ್ಲ, ಯುವಕರಿಗೆ ಕೆಲಸ ಸಿಗಲಿ ಎಂದು ಸಹಾಯ ಮಾಡಿದೆ ಎಂದು ಸುಬ್ಬುಸ್ವಾಮಿ ಹೇಳಿದ್ದಾರೆ.
ವಿಕಾಸ್ ರಾಣಾ ಎಂಬ ವಂಚಕ ಉತ್ತರ ರೈಲ್ವೆಯ ನಿರ್ದೇಶಕ ಎಂದು ಹೇಳಿಕೊಂಡಿದ್ದ. ವಂಚನೆಗೆ ಒಳಗಾದವರ ಪೈಕಿ ಹೆಚ್ಚಿನವರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಪಡೆದವರೇ ಆಗಿದ್ದಾರೆ. ಕೊಯಮತ್ತೂರಿನ ಶಿವರಾಮನ್ ಎಂಬಾತನೂ ಈ ಹಗರಣದಲ್ಲಿ ಭಾಗಿಯಾಗಿದ್ದಾನೆ. ತನಗೆ ಸಂಸದರು, ಸಚಿವರ ಪರಿಚಯ ಇದೆ ಎಂದು ಹೇಳಿಕೊಂಡಿದ್ದ ಎಂದು ನಿವೃತ್ತ ಯೋಧ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಸಚಿವಾಲಯದ ಅಧಿಕಾರಿಗಳು, ಇದೊಂದು ದೊಡ್ಡ ಹಗರಣ. ನೇಮಕಕ್ಕೆ ಸಂಬಂಧಿಸಿ ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.