ನವದೆಹಲಿ:ದೆಹಲಿ, ಪಂಜಾಬ್ ಮತ್ತು ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯ ಪರಿಣಾಮ ಪವರ್ ಕಟ್ ಎದುರಿಸುವಂತಾಗಿದೆ. ಅಷ್ಟೇ ಅಲ್ಲ ದೆಹಲಿಯಲ್ಲಿ ಆಸ್ಪತ್ರೆಗಳು ಮತ್ತು ಮೆಟ್ರೋ ಸಂಚಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ ತಿಪ್ಪೆ ಸಾರಿಸುವುದಾದರೆ ದಿವ್ಯಾ ಹಾಗರಗಿ ಮೇಲೆ ಎಫ್ಐಆರ್ ಆಗುತ್ತಿರಲಿಲ್ಲ: ಸಿ.ಟಿ ರವಿ
ಭಾರೀ ಪ್ರಮಾಣದ ಕಲ್ಲಿದ್ದಲು ಕೊರತೆಯಿಂದಾಗಿ ಆಸ್ಪತ್ರೆಗಳು ಮತ್ತು ಮೆಟ್ರೋ ರೈಲುಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವುದು ಅಸಾಧ್ಯವಾಗುವ ಸಾಧ್ಯತೆ ಇರುವುದಾಗಿ ದೆಹಲಿ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಅವರು ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿ, ವಿವರವನ್ನು ಪಡೆದುಕೊಂಡಿದ್ದಾರೆ. ಮತ್ತು ಸೂಕ್ತ ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯವಾಗುವಂತೆ ಮಾಡುವ ಮೂಲಕ ರಾಷ್ಟ್ರರಾಜಧಾನಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಸಮಸ್ಯೆ ಎದುರಾಗದಂತೆ ಗಮನಹರಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಜೈನ್ ತಿಳಿಸಿದ್ದಾರೆ.
ದೆಹಲಿಯ ದಾದ್ರಿ || ಮತ್ತು ಉಂಚಾಹಾರ್ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಸರಬರಾಜು ಮಾಡುವಲ್ಲಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಮತ್ತು ದೆಹಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ತುರ್ತು ಅಗತ್ಯವಿರುವ ಸಂಸ್ಥೆಗಳಿಗೆ 24 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಸಮಸ್ಯೆ ಎದುರಾಗಬಹುದು ಎಂದು ದೆಹಲಿ ಸರ್ಕಾರ ಪ್ರಕಟಣೆಯಲ್ಲಿ ವಿವರಿಸಿದೆ.
ಪಂಜಾಬ್ ನಲ್ಲಿ ಶೇ.40ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಳ:
ಪಂಜಾಬ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ವಿದ್ಯುತ್ ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದರೂ ಸಹ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಇಂಧನ ಸಚಿವರ ನಿವಾಸದ ಎದುರು ಶುಕ್ರವಾರ (ಏ.29) ಪ್ರತಿಭಟನೆ ನಡೆಸುವುದಾಗಿ ಕಿಸಾನ್ ಮಜದ್ದೂರ್ ಸಂಘರ್ಷ ಸಮಿತಿ ಘೋಷಿಸಿತ್ತು.
ಉತ್ತರಪ್ರದೇಶದಲ್ಲಿಯೂ ವಿದ್ಯುತ್ ಕೊರತೆ:
ಕಲ್ಲಿದ್ದಲು ಕೊರತೆಯ ಹಿನ್ನೆಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಕೂಡಾ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೇವಲ ನಾಲ್ಕನೇ ಒಂದರಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹ ಇದ್ದಿದ್ದು, ಇದು ಬೇಡಿಕೆ ಪ್ರಮಾಣದ ವಿದ್ಯುತ್ ಗಿಂತ ಅತೀ ಕಡಿಮೆ ಪ್ರಮಾಣದ ಕಲ್ಲಿದ್ದಲು ಸಂಗ್ರಹ ಹೊಂದಿರುವುದಾಗಿ ವರದಿ ತಿಳಿಸಿದೆ.