ಹೊಸದಿಲ್ಲಿ: ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನವನ್ನು ಖಾಯಂಗೊಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಡೆಲ್ಲಿಗಿಂತ ತುಸು ಮೇಲಿರುವ ಪಂಜಾಬ್ ಕಿಂಗ್ಸ್ ತಂಡಗಳು ಶನಿವಾರ ರಾತ್ರಿ ಪರಸ್ಪರ ಎದುರಾಗಲಿವೆ. ಈಗಿನ ಸ್ಥಿತಿಯಂತೆ ಇದೊಂದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಪಂಜಾಬ್ ಮುಂದೆ ಕ್ಷೀಣ ಅವಕಾಶ ಇರುವುದನ್ನು ಮರೆಯುವಂತಿಲ್ಲ.
ಡೆಲ್ಲಿ 11ರಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದರೆ, ಪಂಜಾಬ್ 11ರಲ್ಲಿ 5 ಪಂದ್ಯಗಳನ್ನು ಜಯಿಸಿದೆ. ಇತ್ತಂಡಗಳು ಉಳಿದ ಮೂರೂ ಪಂದ್ಯಗಳನ್ನು ಜಯಿಸುವ ಸ್ಥಿತಿಯಲ್ಲಿಲ್ಲ. ರನ್‌ರೇಟ್ ಅಂತೂ ಮೈನಸ್‌ನಿಂದ ಮೇಲೇರಿಲ್ಲ.
ಡೆಲ್ಲಿಯ ದುರಂತಕ್ಕೆ ಮೂಲ ಕಾರಣ, ತವರಿನ ಬ್ಯಾಟರ್‌ಗಳೆಲ್ಲ ಕೈಕೊಟ್ಟದ್ದು. ಪೃಥ್ವಿ ಶಾ, ಸಫರಾಜ್ ಖಾನ್, ಮನೀಷ್ ಪಾಂಡೆ, ರಿಪಲ್ ಪಟೇಲ್, ಅಮಾನ್ ಹಕೀಂ ಖಾನ್ ಅವರೆಲ್ಲ ಸಾಧನೆ ಮಾಡದೆಯೇ ಸುದ್ದಿಯಾದರು. ಮಿಂಚಿದ ಏಕೈಕ ಆಟಗಾರನೆಂದರೆ ಅಕ್ಷರ್ ಪಟೇಲ್. ಬೌಲಿಂಗ್‌ನಲ್ಲಿ ಕ್ಲಿಕ್ ಆಗದಿದ್ದರೂ ಅಕ್ಷರ್ ಬ್ಯಾಟ್ ಮೂಲಕ ಮಾತಾಡತೊಡಗಿದರು. ಹೀಗಾಗಿ ತಂಡ ವಿದೇಶಿ ಆಟಗಾರರನ್ನು ಹೆಚ್ಚು ನೆಚ್ಚಿಕೊಳ್ಳಬೇಕಾಯಿತು. ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್ ಅಲ್ಲಲ್ಲಿ, ಆಗಾಗ ಮಿಂಚಿದರು. ಒಟ್ಟಾರೆ ಪರಿಣಾಮ ಮಾತ್ರ ಶೂನ್ಯ.
ಪಂಜಾಬ್ “ಮಸ್ಟ್ ವಿನ್” ಸ್ಥಿಯಲ್ಲಿರುವ ತಂಡ. ಇಲ್ಲಿಂದ ಮುಂದೆ ಎಲ್ಲ ಪಂದ್ಯಗಳನ್ನು ಗೆದ್ದರೆ ಅಂಕ 16ಕ್ಕೆ ಏರುತ್ತದೆ. ಆಗ ಪ್ಲೇ-ಆಫ್ ಪ್ರವೇಶದ ರೇಸ್‌ನಲ್ಲಿ ಉಳಿಯುವ ಕ್ಷೀಣ ಅವಕಾಶವೊಂದು ಲಭಿಸುತ್ತದೆ. ಒಂದು ವೇಳೆ ಡೆಲ್ಲಿ ವಿರುದ್ಧ ಎಡವಿದರೆ ಆಗ ಶಿಖರ್ ಧವನ್ ಪಡೆಯ 2023ರ ಐಪಿಎಲ್ ಅಭಿಯಾನ ಕೊನೆಗೊಳ್ಳಲಿದೆ.
ಕಳೆದೆರಡು ಪಂದ್ಯಗಳಲ್ಲಿ ಪಂಜಾಬ್ ಬೌಲರ್‌ಗಳು ತಂಡದ ಮೊತ್ತವನ್ನು ಉಳಿಸಿಕೊಡುವಲ್ಲಿ ಸಂಪೂರ್ಣವಾಗಿ ಎಡವಿದ್ದರು. ಹೀಗಾಗಿ ಮುಂಬೈ ಮತ್ತು ಕೆಕೆಆರ್ ವಿರುದ್ಧ ಸೋಲು ಕಾಣಬೇಕಾಯಿತು. ಸದ್ಯ ಪಂಜಾಬ್ ಬ್ಯಾಟಿಂಗ್ ಸರದಿಯ ನಂಬಲರ್ಹ ಆಟಗಾರರೆಂದರೆ ಶಿಖರ್ ಧವನ್, ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮ ಮಾತ್ರ.