ನವದೆಹಲಿ:ಕೋವಿಡ್ ನ ಮಾರಣಾಂತಿಕ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಕೋವಿಡ್ ಲಸಿಕೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ(ಮೇ 10) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸಾಲ ಕಂತು ಪಾವತಿಗೆ ಕೃಷಿಕರಿಗೆ ನೋಟಿಸ್ : ಅವಧಿ ವಿಸ್ತರಿಸುವಂತೆ ಸಿಎಂ ಗೆ ಸಚಿವ ಕೋಟ ಮನವಿ
ಕೋವಿಡ್ 3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಆಕ್ಸಿಜನ್ , ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದ್ದೇವೆ. ಈ ಎರಡನೇ ಅಲೆಯಲ್ಲಿ ದೆಹಲಿಯಲ್ಲಿ ದಿನಂಪ್ರತಿ 28ಸಾವಿರ ದಾಖಲೆಯ ಕೋವಿಡ್ ಪ್ರಕರಣ ಪತ್ತೆಯಾಗುತ್ತಿದೆ.
ಇದಕ್ಕಾಗಿ ನಾವು ಮೂಲಭೂತ ಸೌಕರ್ಯವನ್ನು ಸಿದ್ಧಪಡಿಸಿಕೊಳ್ಳಬೇಕು. ಆಗ ಒಂದು ವೇಳೆ ದಿನಂಪ್ರತಿ 30 ಸಾವಿರ ಪ್ರಕರಣ ಪತ್ತೆಯಾದರೂ ನಾವು ಸಮರ್ಪಕವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಕೇಜ್ರಿವಾಲ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಕೊರತೆಯ ವಿಷಯ ಪ್ರಸ್ತಾಪಿಸಿದ ಕೇಜ್ರಿವಾಲ್, ಇನ್ನು ಮೂರು, ನಾಲ್ಕು ದಿನಗಳಲ್ಲಿ ಲಸಿಕೆ ಸಂಗ್ರಹ ಖಾಲಿಯಾಗಲಿದೆ. ನಾವು ಲಸಿಕೆ ಸರಬರಾಜು ಮಾಡುವಂತೆ ಕಂಪನಿಗಳಿಗೆ ಆರ್ಡರ್ ನೀಡಿದ್ದೇವೆ. ಆದರೆ ನನ್ನ ಆಲೋಚನೆ ಪ್ರಕಾರ ಲಸಿಕೆ ಸಂಗ್ರಹದ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸೋಮವಾರ ದೆಹಲಿಯಲ್ಲಿ ಕೋವಿಡ್ ಸೋಂಕಿನಿಂದ 319 ಮಂದಿ ಸಾವನ್ನಪ್ಪಿದ್ದು, 12,651 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಕಳೆದ ನಾಲ್ಕು ವಾರಗಳಲ್ಲಿ ಪತ್ತೆಯಾದ ಕಡಿಮೆ ಪ್ರಮಾಣದ ಪ್ರಕರಣಗಳು.