ನವದೆಹಲಿ: “ಕೋಳಿ ಮೊದಲಾ? ಮೊಟ್ಟೆ ಮೊದಲಾ?’ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನೂ ಶತಮಾನಗಳಿಂದ ಕಾಡುತ್ತಿರುವ ಈ ಪ್ರಶ್ನೆಗೆ ವಿಜ್ಞಾನ ಕೊನೆಗೂ ಒಂದು ಉತ್ತರ ನೀಡಿದೆ.
ಜಿನೆವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಲವು ವರ್ಷಗಳ ಸಂಶೋಧನೆ ನಡೆಸಿದ್ದು, ಮೊಟ್ಟೆಯೇ ಮೊದಲು ಸೃಷ್ಟಿಯಾಗಿದ್ದು ಎಂದು ಹೇಳಿದ್ದಾರೆ.
ಏಕ ಕೋಶದ ಬೆಳವಣಿಗೆಯನ್ನು ಅಧ್ಯಯನ ಮಾಡುವ “ಕ್ರೋಮೋಸ್ಪಿಯರಾ ಪೆರ್ಸಿಂಕಿ’ ವಿಧಾನದ ಮೂಲಕ ವಿಜ್ಞಾನಿಗಳು ಇದನ್ನು ಸಾಬೀತು ಪಡಿಸಿದ್ದಾರೆ. ಜೀವಸೃಷ್ಟಿಯಲ್ಲಿ ಮೊದಲಿಗೆ ಒಂದು ಜೀವಕೋಶ ಉತ್ಪತ್ತಿಯಾಗುತ್ತದೆ. ಬಳಿಕ ಅದು ನಿಧಾನವಾಗಿ ಅಂದರೆ ಸಾವಿರಾರು ವರ್ಷಗಳವರೆಗೆ ನಿರಂತರವಾಗಿ ಅಭಿವೃದ್ಧಿ ಸಾಧಿಸುತ್ತಾ ಹೋಗುತ್ತದೆ. ಹೀಗಾಗಿ ಯಾವುದೇ ಜೀವಿಯ ಹುಟ್ಟಿನಲ್ಲಿ ಅದರ ಭ್ರೂಣ ಮೊದಲ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ನೋಡುವುದಾದರೆ, ಒಂದು ಜೀವಕೋಶದಿಂದ ಸೃಷ್ಟಿಯಾಗುವ ಮೊಟ್ಟೆಯೇ ಮೊದಲು ಸೃಷ್ಟಿಯಾಗಿರಬೇಕು. ವರ್ಷಗಳ ಬಳಿಕ ಅದರಿಂದ ಹುಟ್ಟುವ ಮರಿ ಕೋಳಿಯ ರೂಪ (ಪಕ್ಷಿಯ ರೂಪ) ಪಡೆದುಕೊಂಡಿರಬೇಕು ಎಂದು ಅವರು ಹೇಳಿದ್ದಾರೆ. ಈ ಹೊಸ ಅಧ್ಯಯನ ವರದಿಯು ಜೀವವಿಕಾಸದ ಮತ್ತೂಂದು ಮಜಲನ್ನು ತೋರಿಸಿದರೂ, ವಿಶ್ವದಲ್ಲಿ ಎಲ್ಲವೂ 1 ಸಣ್ಣ ಕಣದಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ ಎಂದು ಅವರು ಹೇಳಿದ್ದಾರೆ.