ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ- ಬಿಜೆಪಿ- ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ದಿಲ್ಲಿ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು, ಶೇ.57ರಷ್ಟು ಮತದಾನ ದಾಖಲಾಗಿದೆ.
2015ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಇಳಿ ಮುಖವಾಗಿದೆ. ಹಿಂದಿನ ಚುನಾವಣೆಯಲ್ಲಿ ಶೇ.67ರಷ್ಟು ಮತದಾನ ದಾಖಲಾಗಿತ್ತು. ಸುಮಾರು 1.47 ಕೋಟಿ ಮತದಾರರು 672 ಅಭ್ಯರ್ಥಿಗಳ ಹಣೆಬರಹವನ್ನು ಬರೆದಿದ್ದು, ಇದೇ 11ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಜ್ರಿವಾಲ್- ಇರಾನಿ ವಾಗ್ಯುದ್ಧ: ಮತದಾನದ ದಿನವೇ ಸಿಎಂ ಕೇಜ್ರಿ ವಾಲ್ ಹಾಗೂ ಕೇಂದ್ರ ಸಚಿವೆ ಸ್ಮತಿ ಇರಾನಿ ನಡುವೆ ಟ್ವಿಟರ್ ವಾರ್ ನಡೆದಿದೆ. “ಹಕ್ಕು ಚಲಾಯಿಸುವ ಮುನ್ನ ಮನೆಯಲ್ಲಿರುವ ಪುರುಷ ರೊಂದಿಗೆ ಸಮಾಲೋಚಿಸಿ, ಯಾರು ಸೂಕ್ತ ಅಭ್ಯರ್ಥಿ ಎಂದು ಚರ್ಚಿಸಿ, ಮತ ಚಲಾಯಿಸಿ’ ಎಂಬ ಕೇಜ್ರಿವಾಲ್ ಅವರು ಮಹಿಳಾ ಮತದಾರರಿಗೆ ಕೋರಿದ್ದರು. ಈ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಇರಾನಿ, “ಯಾರಿಗೆ ಮತ ಚಲಾಯಿಸಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ಮಹಿಳೆಯರಿಗೆ ಇಲ್ಲ ಎಂದು ನೀವು ಭಾವಿಸಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿ, “ಈ ಬಾರಿ ದಿಲ್ಲಿಯಲ್ಲಿ ಇಡೀ ಕುಟುಂಬದ ಮತದಾನದ ಆಯ್ಕೆಯನ್ನು ಮಹಿಳೆಯರೇ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಆಪ್ ಕಾರ್ಯಕರ್ತನಿಗೆ ಕಪಾಳಮೋಕ್ಷ: ಮತಗಟ್ಟೆ ಹೊರಗೆ
ಕಾಂಗ್ರೆಸ್‌ನ ಚಾಂದಿನಿ ಚೌಕ್ ಅಭ್ಯರ್ಥಿ ಅಲ್ಕಾ ಲಂಬಾ ಅವರು ಆಪ್ ಕಾರ್ಯಕರ್ತನೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಒಂದು ಹಂತದಲ್ಲಿ ಆತನಿಗೆ ಕಪಾಳಮೋಕ್ಷ ಮಾಡಲು ಯತ್ನಿಸಿದ ಘಟನೆ ನಡೆದಿದೆ. ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಕ್ಕೆ ಆಕ್ರೋಶಗೊಂಡಿದ್ದಾಗಿ ಲಂಬಾ ಹೇಳಿದ್ದಾರೆ.
ಜನರ ಆಶೀರ್ವಾದ ನಮ್ಮ ಮೇಲಿದೆ. 50ಕ್ಕಿಂತಲೂ ಹೆಚ್ಚು ಸೀಟು ಗಳಿಸಿ ದಿಲ್ಲಿಯಲ್ಲಿ ಬಿಜೆಪಿಯೇ ಸರಕಾರ ರಚಿಸಲಿದೆ ಎಂದು ನನ್ನ ಒಳಮನಸ್ಸು ಹೇಳುತ್ತಿದೆ.
– ಮನೋಜ್ ತಿವಾರಿ, ದಿಲ್ಲಿ ಬಿಜೆಪಿ ಅಧ್ಯಕ್ಷ