Advertisement

ಸಹಜ ಸ್ಥಿತಿಗೆ ದೆಹಲಿ: ದಂಗೆಕೋರರ ಆಸ್ತಿ ಜಪ್ತಿಗೆ ದಿಲ್ಲಿ ಪೊಲೀಸರ ಚಿಂತನೆ 

10:22 AM Mar 02, 2020 | sudhir |

ನವದೆಹಲಿ: ಗಲಭೆ ಪೀಡಿತ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳುತ್ತಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದ ತನಿಖೆ ಚುರುಕಾಗಿದೆ. ದೆಹಲಿ ಪೊಲೀಸರು, ಉತ್ತರಪ್ರದೇಶವನ್ನು ಮಾದರಿಯಾಗಿಟ್ಟುಕೊಂಡು, ದಾಳಿಕೋರರ ಆಸ್ತಿ ಜಪ್ತಿ ಮಾಡಲು ಚಿಂತನೆ ನಡೆಸಿದ್ದಾರೆ.

Advertisement

ಹಿಂಸಾಚಾರದ ವೇಳೆ ನಡೆದ ಕಲ್ಲುತೂರಾಟ, ಬೆಂಕಿ ಹಚ್ಚಿರುವಂಥ ಘಟನೆಗಳಿಂದ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ನಷ್ಟವುಂಟಾಗಿದ್ದು, ಅದನ್ನು ದಾಳಿಕೋರರಿಂದಲೇ ಭರಿಸಲು ಹಾಗೂ ಅವರಿಗೆ ದಂಡ ವಿಧಿಸಲು ಯೋಜಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಷ್ಟದ ಮೊತ್ತವನ್ನು ಅಂದಾಜಿಸುವಲ್ಲಿ ಸ್ಥಳೀಯಾಡಳಿತಕ್ಕೆ ನೆರವಾಗುವಂತೆ ಈಗಾಗಲೇ ಕ್ರೈಂ ಬ್ರಾಂಚ್‌ನ ವಿಶೇಷ ತನಿಖಾ ತಂಡ ಹಾಗೂ ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ.

ವಾಟ್ಸ್‌ಆ್ಯಪ್‌ ಸಂಖ್ಯೆ: ಪ್ರಚೋದನಕಾರಿ ಅಥವಾ ದ್ವೇಷಪೂರಿತ ಸಂದೇಶಗಳು ಬಂದರೆ, ಅವುಗಳ ಕುರಿತು ದೂರು ನೀಡಲು ವಾಟ್ಸ್‌ಆ್ಯಪ್‌ ಸಂಖ್ಯೆಯೊಂದನ್ನು ಆರಂಭಿಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ, ಅಂಥ ಸಂದೇಶಗಳನ್ನು ಇತರರಿಗೆ ಫಾರ್ವರ್ಡ್‌ ಮಾಡುವುದು ಅಪರಾಧವಾಗಿದ್ದು, ಆ ರೀತಿ ಮಾಡದಂತೆಯೂ ಜನರಿಗೆ ಸೂಚಿಸಲು ಮುಂದಾಗಿದೆ.

ಶಾಂತಿ ಯಾತ್ರೆ: ದೆಹಲಿ ಗಲಭೆ ಹಿನ್ನೆಲೆಯಲ್ಲಿ “ಜಿಹಾದಿ ಭಯೋತ್ಪಾದನೆ’ ವಿರೋಧಿಸಿ ಜಂತರ್‌ಮಂತರ್‌ನಲ್ಲಿ ಶನಿವಾರ ಶಾಂತಿ ಯಾತ್ರೆ ನಡೆದಿದೆ. ಜೈ ಶ್ರೀ ರಾಮ್‌, ಭಾರತ್‌ ಮಾತಾ ಕೀ ಜೈ ಹಾಗೂ ದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆಗಳನ್ನು ಕೂಗುತ್ತಾ ನೂರಾರು ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿ ಶಾಂತಿ ವೇದಿಕೆ ಎಂಬ ಎನ್‌ಜಿಒ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಕೂಡ ಭಾಗಿಯಾಗಿದ್ದರು.

Advertisement

ಈ ನಡುವೆ, ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್‌ ಮುಖ್ಯ ಪೇದೆ ಹಾಗೂ ಗುಪ್ತಚರ ಇಲಾಖೆ ಸಿಬ್ಬಂದಿಯ ಕುಟುಂಬಕ್ಕೆ ತನ್ನ ಒಂದು ತಿಂಗಳ ವೇತನವನ್ನು ನೀಡುವುದಾಗಿ ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಘೋಷಿಸಿದ್ದಾರೆ.

6 ಮಂದಿಯ ಬಂಧನ: ಶನಿವಾರ ದೆಹಲಿ ಮೆಟ್ರೋ ರೈಲಿನೊಳಗೆ ಹಾಗೂ ರಾಜೀವ್‌ ಚೌಕ್‌ ಮೆಟ್ರೋ ನಿಲ್ದಾಣದಲ್ಲಿ ಪೌರತ್ವ ಕಾಯ್ದೆಯ ಬೆಂಬಲಿಗರು “ಗೋಲಿ ಮಾರೋ ಸಾಲೋಂ ಕೋ'(ದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಘೋಷಣೆ ಕೂಗಿದ್ದು, ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ.

ಮಾ.7ರವೆರೆಗೂ ಶಾಲೆಗೆ ರಜೆ: ಹಿಂಸಾಚಾರದ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯ ಎಲ್ಲ ಶಾಲೆಗಳಿಗೂ ಮಾರ್ಚ್‌ 7ರವೆರೆಗೆ ರಜೆ ಘೋಷಿಸಲಾಗಿದೆ. ಜತೆಗೆ, ವಾರ್ಷಿಕ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.

ಮನೆ ಕಟ್ಟಿಸಿಕೊಡಲಿದೆ ಬಿಎಸ್‌ಎಫ್: ದೆಹಲಿ ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಬಿಎಸ್‌ಎಫ್ ಯೋಧರೊಬ್ಬರ ಮನೆಗೂ ಬೆಂಕಿ ಹಚ್ಚಿದ್ದು, ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆಯಲ್ಲಿ 29 ವರ್ಷದ ಯೋಧ ಮೊಹಮ್ಮದ್‌ ಅನೀಸ್‌ ಅವರಿಗೆ ತಾವೇ ಮನೆ ಕಟ್ಟಿ, ಅವರ ಮದುವೆಯ ಉಡುಗೊರೆಯಾಗಿ ನೀಡಲಿದ್ದೇವೆ ಎಂದು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಶನಿವಾರ ಘೋಷಿಸಿದೆ. ಏಪ್ರಿಲ್‌ ತಿಂಗಳಲ್ಲಿ ಅನೀಸ್‌ ಅವರ ಮದುವೆಯಿದ್ದು, ಅದಕ್ಕೂ ಮೊದಲೇ ಮನೆ ನಿರ್ಮಾಣ ಕಾರ್ಯ ಮುಗಿಸಲು ಬಿಎಸ್‌ಎಫ್ ನಿರ್ಧರಿಸಿದೆ.

ಸ್ಫೋಟಕ ಮಾಹಿತಿ ಬಹಿರಂಗ
42 ಮಂದಿಯನ್ನು ಬಲಿಪಡೆದುಕೊಂಡ ದೆಹಲಿ ಗಲಭೆಗೆ ಸಂಬಂಧಿಸಿದ ತನಿಖೆಯಲ್ಲಿ ಅನೇಕ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಗಲಭೆಕೋರರು ವಾಣಿಜ್ಯಿಕ ಆ್ಯಸಿಡ್‌ಗಳನ್ನು ಸಂಗ್ರಹಿಸಿಟ್ಟುಕೊಂಡು, ದಾಳಿ ವೇಳೆ ಬಳಸಿದ್ದಾರೆ ಎನ್ನಲಾಗಿದೆ. ಮುಸ್ತಫಾಬಾದ್‌ನಲ್ಲಿ ಅನೇಕ ಅಕ್ರಮ ಫ್ಯಾಕ್ಟರಿಗಳಿದ್ದು, ಅಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಇಂಥ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನು, ಮದ್ಯದಂಗಡಿಗಳಿಂದ ಲೂಟಿ ಮಾಡಲಾದ ಆಲ್ಕೋಹಾಲ್‌ ಬಾಟಲಿಗಳನ್ನು ಬಳಸಿ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಭೆ ವೇಳೆ ಬಳಸಲಾಗಿದ್ದ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, .32 ಮಿ.ಮೀ.(25 ಮೀಟರ್‌ ವ್ಯಾಪ್ತಿ) ಮತ್ತು .9 ಮಿ.ಮೀ.(70 ಮೀಟರ್‌ ವ್ಯಾಪ್ತಿ)ಯ ಪಿಸ್ತೂಲುಗಳನ್ನು ಅತಿ ಹೆಚ್ಚು ಬಳಸಿರುವುದು ಗಮನಕ್ಕೆ ಬಂದಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ನೌ ವರದಿ ಮಾಡಿದೆ.

ಒಬ್ಬ ಮುಸ್ಲಿಮನಾಗಿ ನಾನು ಭಾರತದಲ್ಲಿ ಸುರಕ್ಷಿತ ಭಾವ ಹೊಂದಿದ್ದೇನೆ. ಪೌರತ್ವ ಕಾಯ್ದೆಯು ಪೌರತ್ವವನ್ನು ಬಯಸುವ ಜನರಿಗೆ ತ್ವರಿತವಾಗಿ ನೀಡಲು ಜಾರಿಯಾಗುತ್ತಿದೆಯೇ ವಿನಾ, ಇಲ್ಲಿರುವ ಭಾರತೀಯರಿಗಾಗಿ ಅಲ್ಲ.
– ಅದ್ನಾನ್‌ ಸಾಮಿ, ಗಾಯಕ

Advertisement

Udayavani is now on Telegram. Click here to join our channel and stay updated with the latest news.

Next