Advertisement

ಕೋರ್ಟ್‌ ಗೇಟ್‌ ಮುಚ್ಚಿ ಪ್ರತಿಭಟನೆ ; ಪೊಲೀಸರ ವಿರುದ್ಧ ಕ್ರಮಕ್ಕೆ ವಕೀಲರ ಪಟ್ಟು

09:53 AM Nov 08, 2019 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆಯ ಕಾವು ಇನ್ನೂ ತಗ್ಗಿಲ್ಲ. ಪೊಲೀಸರು ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಬುಧವಾರ ದಿಲ್ಲಿಯಲ್ಲಿ ವಕೀಲರು ಕೆಳಹಂತದ ಎಲ್ಲ ನ್ಯಾಯಾಲಯಗಳನ್ನೂ ಮುಚ್ಚಿ ಪ್ರತಿಭಟಿಸಿದ್ದಾರೆ.

Advertisement

ಸತತ ಮೂರು ದಿನದಿಂದಲೂ ವಕೀಲರು ಪ್ರತಿಭಟಿಸುತ್ತಿದ್ದು, ಬುಧವಾರ ಮಾತ್ರ ಪಟಿಯಾಲಾ ಹೌಸ್‌ ಮತ್ತು ಸಾಕೇತ್‌ ಜಿಲ್ಲಾ ನ್ಯಾಯಾಲಯಗಳ ಗೇಟುಗಳ ಬಾಗಿಲುಗಳನ್ನು ಮುಚ್ಚುವ ಮೂಲಕ ಅರ್ಜಿದಾರರಿಗೂ ಒಳಗೆ ಬರಲು ಅವಕಾಶ ನೀಡಲಿಲ್ಲ. ಜತೆಗೆ, ವಕೀಲರ ಮೇಲೆ ಲಾಠಿ ಪ್ರಹಾರ ಮಾಡಿ, ಗಾಯಗೊಳಿಸಿದ ಪೊಲೀಸರನ್ನು ಬಂಧಿಸುವವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದೂ ಪ್ರತಿಭಟನಾನಿರತರು ಹೇಳಿದ್ದಾರೆ. ಇನ್ನೊಂದೆಡೆ, ಮಂಗಳವಾರ ಪೊಲೀಸರು ನಡೆಸಿದ ಪ್ರತಿಭಟನೆಯು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿ ದಿಲ್ಲಿ ಪೊಲೀಸ್‌ ಮುಖ್ಯಸ್ಥರಿಗೆ ವಕೀಲರೊಬ್ಬರು ಕಾನೂನು ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ.

ಕರಾಳ ದಿನ: ಪೊಲೀಸರು ಮಂಗಳವಾರ ನಡೆಸಿದ ಪ್ರತಿ ಭಟನೆಯು ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಎಂದು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಬಣ್ಣಿಸಿದೆ. ಜತೆಗೆ, ಪೊಲೀಸರ ಪ್ರತಿಭಟನೆಯು ರಾಜಕೀಯಪ್ರೇರಿತ ಎಂದು ಗೋಚರಿಸುತ್ತಿದೆ. ತಪ್ಪಿತಸ್ಥ ಪೊಲೀಸರನ್ನು ವಾರದೊಳಗೆ ಬಂಧಿಸಬೇಕು ಎಂದೂ ಆಗ್ರಹಿಸಿದೆ.

ಆರಂಭದಲ್ಲಿ ನಾವೇ ವಕೀಲರಿಗೆ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದೆವು. ಆದರೆ, ಪೊಲಿಸರ ವರ್ತನೆ ನೋಡಿದ ಮೇಲೆ ನಾವಿನ್ನು ಸುಮ್ಮನಿರುವುದು ಸರಿಯಲ್ಲ ಎಂದಿನಿಸಿತು.ಪ್ರತಿಭಟನಾನಿರತ ಪೊಲೀಸರು ಕರ್ತವ್ಯಕ್ಕೆ ಗೈರಾಗಿದ್ದು ಮಾತ್ರವಲ್ಲ, ಅಶ್ಲೀಲ ಭಾಷೆಯಲ್ಲಿ ಘೋಷಣೆ ಕೂಗುತ್ತಿದ್ದರು, ವಕೀಲರನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಮುಕ್ತವಾಗಿ ಹಾಕುತ್ತಿದ್ದರು ಎಂದು ಬಿಸಿಐ ಮುಖ್ಯಸ್ಥ ಮನನ್‌ ಕುಮಾರ್‌ ಹೇಳಿದ್ದಾರೆ.

ವಕೀಲರಿಂದ ಆತ್ಮಹತ್ಯೆ ಯತ್ನ
ದಿಲ್ಲಿಯ ರೋಹಿಣಿ ಕೋರ್ಟ್‌ನ ಇಬ್ಬರು ವಕೀಲರು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಒಬ್ಬ ವಕೀಲ ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರೆ, ಮತ್ತೂಬ್ಬರು ಕೋರ್ಟ್‌ ಕಟ್ಟಡದ ಮೇಲೆ ಹತ್ತಿ, ಅಲ್ಲಿಂದ ಹಾರಲು ಮುಂದಾದಾಗ ಅಲ್ಲಿದ್ದವರು ಅವರನ್ನು ತಡೆದಿದ್ದಾರೆ.

Advertisement

ಸ್ಪಷ್ಟನೆಯ ಅಗತ್ಯವಿಲ್ಲ
ತೀಸ್‌ ಹಜಾರಿ ಕೋರ್ಟ್‌ ಆವರಣದಲ್ಲಿ ನಡೆದ ವಕೀಲರು-ಪೊಲೀಸರ ಘರ್ಷಣೆ ಹಿನ್ನೆಲೆ ವಕೀಲರ ವಿರುದ್ಧ ದಾಖಲಾದ 2 ಎಫ್ಐಆರ್‌ಗಳಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆದೇಶ ಕುರಿತು ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್‌ ಬುಧವಾರ ಹೇಳಿದೆ. ಆದೇಶದ ಕುರಿತು ಸ್ಪಷ್ಟನೆ ನೀಡುವಂತೆ ಹಾಗೂ ಮರುಪರಿಶೀಲಿಸುವಂತೆ ಕೇಂದ್ರ ಗೃಹ ಇಲಾಖೆ ಮಂಗಳವಾರ ಹೈಕೋರ್ಟ್‌ಗೆ ಮನವಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next