Advertisement

ಟೂಲ್‌ಗೆ ಐಎಸ್‌ಐ ಲಿಂಕ್‌ : ದಿಲ್ಲಿ ಪೊಲೀಸರ ಶಂಕೆ

02:39 AM Feb 16, 2021 | Team Udayavani |

ಹೊಸದಿಲ್ಲಿ: ಸ್ವೀಡನ್ನಿನ ಗ್ರೆಟಾ ಥನ್‌ಬರ್ಗ್‌ ಟ್ವೀಟಿಸಿದ್ದ ವಿವಾದಿತ ಟೂಲ್‌ ಕಿಟ್‌ ಪ್ರಕರಣ ಊಹೆಗೂ ನಿಲುಕದಂತೆ ನಾನಾ “ದಿಶೆ’ಗೆತಿರುಗುತ್ತಿದೆ. “ಟೂಲ್‌ ಕಿಟ್‌ ಸೃಷ್ಟಿ’ಯ ಸುಳಿಗೆ ಸಿಲುಕಿ, ಜೈಲು ಸೇರಿರುವ ದಿಶಾ ರವಿ, ನಿಕಿತಾ ಜಾಕಬ್‌, ಶಂತನು ಮಲ್ಲಿಕ್‌ಗೆ ಪಾಕ್‌ನ ಗುಪ್ತಚರ ಸಂಸ್ಥೆ “ಐಎಸ್‌ಐ’ ಜತೆಗೆ ಸಂಪರ್ಕ ಇದೆಯೇ ಎಂದು ದಿಲ್ಲಿ ಪೊಲೀಸ್‌ ಆತಂಕಕಾರಿ ಅನುಮಾನ ವ್ಯಕ್ತಪಡಿಸಿದೆ.

Advertisement

“ರೈತರ ಪ್ರತಿಭಟನೆಗೆ ಕುಮ್ಮಕ್ಕು ನೀಡುವ ವಿವರಣೆಗಳೊಂದಿಗೆ ರೂಪಿಸಲಾದ ಟೂಲ್‌ಕಿಟ್‌ ಅನ್ನು ಅತ್ಯಂತ ಜಾಗರೂಕತೆಯಿಂದ ರಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್‌ ಮೂಲಕ ವೈರಲ್‌ ಪೋಸ್ಟ್‌ ಸೃಷ್ಟಿಸಬಲ್ಲ ಸಾಮರ್ಥ್ಯವುಳ್ಳ ಕೆಲವೇ ಕೆಲವು ಸಂಪನ್ಮೂಲ ವ್ಯಕ್ತಿಗಳಿಗೆ ಈ ಟೂಲ್‌ಕಿಟ್‌ ಕಳುಹಿಸಲು ಯೋಜಿಸಲಾಗಿತ್ತು. ಅಂಥವರ ಪಟ್ಟಿಯನ್ನೂ ಸಿದ್ಧಪಡಿಸಲಾಗಿತ್ತು’ ಎಂದು ದಿಲ್ಲಿ ಡಿಸಿಪಿ (ಸೈಬರ್‌) ಮಾನಿಶಿ ಚಂದ್ರ ತಿಳಿಸಿದ್ದಾರೆ.

ಪಟ್ಟಿಯಲ್ಲಿ ಐಎಸ್‌ಐ ಭೂಪ!: “ಟೂಲ್‌ಕಿಟ್‌ ಅನ್ನು ಯಾರ್ಯಾರು ಅನುಸರಿಸಬೇಕು ಎಂಬ ಪಟ್ಟಿಯಲ್ಲಿ ಕೆಲವು ಸುದ್ದಿ ಸಂಸ್ಥೆಗಳು, ಹೆಸರಾಂತ ಫ್ಯಾಕ್ಟ್ ಚೆಕರ್ಸ್‌ ಮತ್ತು ಎನ್‌ಜಿಒಗಳೂ ಇವೆ. ಆ ಪಟ್ಟಿಯಲ್ಲಿ ಪೀಟರ್‌ ಫೆಡ್ರಿಕ್‌ ಎಂಬ ವ್ಯಕ್ತಿಯೂ ಇದ್ದಾನೆ. ಈತನ ಮೇಲೆ ಭಾರತದ ಗುಪ್ತಚರ ಸಂಸ್ಥೆಗಳು 2006ರಿಂದ ಕಣ್ಗಾವಲಿರಿಸಿದೆೆ. ಐಎಸ್‌ಐನ ಕಾಶ್ಮೀರ ಡೆಸ್ಕ್ನಲ್ಲಿ ಕುಳಿತು ಭಾರತದ ಪರ ಅಪಪ್ರಚಾರ ನಡೆಸುತ್ತಿರುವ ಇಕ್ಬಾಲ್‌ ಚೌಧರಿಯ ಸಹವರ್ತಿ ಈತ’ ಎಂದು ವಿವರಿಸಿದ್ದಾರೆ.

ದಿಶಾ ಟೀಂಗೆ ಸಂಪರ್ಕವಿತ್ತೇ?: “ದಿಶಾ ಸೇರಿದಂತೆ ಬಂಧಿತ ಮೂವರು ಫೆಡ್ರಿಕ್‌ ಜತೆಗೆ ಸಂಪರ್ಕ ಹೊಂದಿದ್ದರೇ ಎಂಬುದರ ಕುರಿತು ವಿಚಾರಣೆ ಸಾಗಿದೆ. ಫೆಡ್ರಿಕ್‌ನನ್ನು ಸಂಪನ್ಮೂಲ ವ್ಯಕ್ತಿಯಾಗಿ ಪಟ್ಟಿಯಲ್ಲಿ ಸ್ಥಾನ ನೀಡಿದ್ದೇಕೆ? ಇವರಿಗೂ ಇಕ್ಬಾಲ್‌ ಚೌಧರಿ ಜತೆಗೆ ನಂಟಿತ್ತೇ?- ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ತನಿಖೆ ತೀವ್ರಗೊಳಿಸಿದ್ದೇವೆ’ ಎನ್ನುತ್ತಾರೆ, ಡಿಸಿಪಿ ಮಾನಿಶಿ.

ನಿಕಿತಾ, ಶಂತನುಗೂ ಮುಂಚೆ ದಿಶಾ ಸಿಕ್ಕಿದ್ದೇಕೆ?:

Advertisement

ದಿಲ್ಲಿ ಪೊಲೀಸ್‌ ಮೊದಲು ಬಲೆ ಹೆಣೆದಿದ್ದು ನಿಖೀತಾ, ಶಂತನುಗೆ. ಆದರೆ ಅವರಿಗೂ ಮುನ್ನವೇ ದಿಶಾ ಪೊಲೀಸರ ವಶವಾಗಿದ್ದಾಳೆ! ಇದಕ್ಕೆ ಕಾರಣವೂ ಇದೆ. ಫೆ. 9ರಂದು ನಿಖೀತಾ ವಿರುದ್ಧ ದಿಲ್ಲಿ ಪೊಲೀಸ್‌ ಸರ್ಚ್‌ ವಾರಂಟ್‌ ಹೊರಡಿಸಿತ್ತು. ಆದರೆ ಮುಂಬಯಿಯ ಮನೆಯಿಂದ ಆಕೆ ನಾಪತ್ತೆಯಾಗಿದ್ದಳು. ಆಕೆ ಬಳಸಿದ್ದ 2 ಲ್ಯಾಪ್‌ಟಾಪ್‌, ಐಫೋನ್‌ಗಳನ್ನು ಅಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಮರುದಿನ ವಿಚಾರಣೆಗೆ ಹಾಜರಾಗುವುದಾಗಿ ಆಕೆ ಬರೆದಿದ್ದ ಪತ್ರವೂ ಪೊಲೀಸರ ಕೈಗೆ ಸಿಕ್ಕಿತ್ತು.

ಆದರೆ, ಫೆ. 12ರಂದು ಮತ್ತೆ ಮನೆಗೆ ಹೋದಾಗಲೂ ನಿಖೀತಾ ಕೈಗೆ ಸಿಕ್ಕಿರಲಿಲ್ಲ. ಬೀಡ್‌ನಲ್ಲಿದ್ದ ಶಂತನು ಮನೆಗೆ ಪೊಲೀಸರು ಹೋದಾಗ, ಆತನೂ ಅಲ್ಲಿಂದ ಪರಾರಿಯಾಗಿದ್ದ. ಆಗ ಪೊಲೀಸರಿಗೆ ಟಾರ್ಗೆಟ್‌ ಆಗಿದ್ದೇ ದಿಶಾ! ಬೆಂಗಳೂರಿನ ಈ ಹುಡುಗಿ ತನ್ನ ತಾಯಿಯ ಸಮ್ಮುಖದಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next