ಹೊಸದಿಲ್ಲಿ: ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ‘ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಕ್ರಮ ಕೈಗೊಳ್ಳಲು ಸಂತ್ರಸ್ತರ ವಿವರಗಳನ್ನು ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಪ್ರಶ್ನಾವಳಿಯನ್ನು ಕಳುಹಿಸಿದ್ದಾರೆ. ಲೈಂಗಿಕ ಕಿರುಕುಳದ ಕುರಿತು ತನ್ನನ್ನು ಸಂಪರ್ಕಿಸುವ ಮಹಿಳೆಯರ ಬಗ್ಗೆ ವಿವರಗಳನ್ನು ನೀಡುವಂತೆ ರಾಹುಲ್ ಗಾಂಧಿಗೆ ಪೊಲೀಸರು ಕೇಳಿದ್ದಾರೆ.
ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು “ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ನಾನು ಕೇಳಿದ್ದೇನೆ” ಎಂದು ಹೇಳಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಈ ಸಂತ್ರಸ್ತರ ವಿವರಗಳನ್ನು ನೀಡಿದರೆ ಅವರಿಗೆ ಭದ್ರತೆಯನ್ನು ಒದಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಭಾರತ-ಆಸೀಸ್ ಏಕದಿನ ಸರಣಿ ಆರಂಭ: ಮೊದಲ ಪಂದ್ಯಕ್ಕೆ ಹಾರ್ದಿಕ್ ನಾಯಕ
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ‘ಕಾನೂನು ಪ್ರಕಾರ ನೋಟಿಸ್ ಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಹೇಳಿದೆ.
“ಪ್ರಧಾನಿ ಮೋದಿ ಮತ್ತು ಅದಾನಿ ಸಂಬಂಧದ ಕುರಿತು ರಾಹುಲ್ ಗಾಂಧಿಯವರ ಪ್ರಶ್ನೆಗಳಿಂದ ತತ್ತರಿಸಿರುವ ಸರ್ಕಾರವು ತನ್ನ ಪೊಲೀಸರ ಹಿಂದೆ ಅಡಗಿಕೊಂಡಿದೆ. ಭಾರತ್ ಜೋಡೋ ಯಾತ್ರೆ ಮುಗಿದ 45 ದಿನಗಳ ನಂತರ, ದೆಹಲಿ ಪೊಲೀಸರು ನೋಟಿಸ್ ಮೂಲಕ ಮಹಿಳೆಯರ ವಿವರಗಳನ್ನು ಕೇಳಿದ್ದಾರೆ” ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.