ಹೊಸದಿಲ್ಲಿ: ಒಂದು ಫೋನ್ ಕರೆ ನಿಮ್ಮ ಜೀವನವನ್ನೇ ಬದಲಿಸಬಹುದು. ಹೌದು ಇಂತಹದ್ದೇ ಘಟನೆ ನಡೆದಿದೆ. ಸುಮಾರು 14,000 ಕಿ.ಮೀ ದೂರದಿಂದ ಬಂದ ಫೋನ್ ಕರೆಯೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವವನ್ನು ಉಳಿಸಿದೆ.
39 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಫೇಸ್ ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಫೇಸ್ ಬುಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಆತ್ಮಹತ್ಯೆಯಿಂದ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಈ ಘಟನೆ ನಡೆದಿದ್ದು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ.
ಫೇಸ್ ಬುಕ್ ನ ಅಮೆರಿಕ ಕಚೇರಿಯಲ್ಲಿ ಈ ವಿಡಿಯೋವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದಾರೆ.
ಜೂನ್ 3 ರ ಮಧ್ಯರಾತ್ರಿಯ ವೇಳೆ ಸೋಹನ್ ಲಾಲ್ (ಹೆಸರು ಬದಲಾಗಿದೆ) ನೆರೆಹೊರೆಯವರೊಂದಿಗೆ ವಾಗ್ವಾದ ನಡೆಸಿದ ಬಳಿಕ ಬೇಸರಗೊಂಡು, ಕೈಯಲ್ಲಿ ಅನೇಕ ಆಳವಾದ ಕಡಿತಗಳನ್ನು ಮಾಡಿಕೊಂಡಿದ್ದ. ಫೇಸ್ ಬುಕ್ ಲೈವ್ ನಲ್ಲಿ ಬೇಸರ ತೋಡಿಕೊಂಡಿದ್ದ. ಆದರೆ ಮಧ್ಯರಾತ್ರಿ ಸುಮಾರು 14,000 ಕಿ.ಮೀ ದೂರದಿಂದ ಬರುವ ಒಂದು ದೂರವಾಣಿ ಕರೆಯಿಂದ ಅವನ ಜೀವವನ್ನು ಉಳಿಸಲಾಗುವುದು ಎಂದು ಅವನಿಗೆ ತಿಳಿದಿರಲಿಲ್ಲ. ಸಿಹಿ ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುವ ಸೋಹನ್ ಲಾಲ್ ಮತ್ತು ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿದ್ದಾನೆ. 2016 ರಲ್ಲಿ ಪತ್ನಿಯ ಮರಣದ ನಂತರ ಸೋಹನ್ ಲಾಲ್ ಭಾವನಾತ್ಮಕವಾಗಿ ದುರ್ಬಲರಾಗಿದ್ದರು. ನೆರೆಹೊರೆಯವರೊಂದಿಗಿನ ವಾಗ್ವಾದವು ಆತ್ಮಹತ್ಯೆಯಂತಹ ಕಠಿಣ ಹೆಜ್ಜೆ ಇಡಲು ಪ್ರೇರೇಪಿಸಿತು ಎಂದು ಫೇಸ್ ಬುಕ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:50 ಪೈಸೆಯ ಶಾಂಪೂ ಮಾರಿ 500 ಕೋಟಿ ದುಡಿದ ಕಥೆ
ಮಧ್ಯರಾತ್ರಿ 12.50ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೂಡಲೇ ಫೇಸ್ ಬುಕ್ ಅಧಿಕಾರಿಗಳು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಹನ್ ಲಾಲ್ ನ ವಿಳಾಸ, ವಿಡಿಯೋಗಳನ್ನು ಕೂಡಲೇ ಪಾಲಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪಾಲಂ ಠಾಣೆಯ ಪಿಎಸ್ ಐ ಅಮಿತ್ ಕುಮಾರ್ ಕೂಡಲೇ ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನು ರಕ್ಷಿಸುವಲ್ಲಿ ಸಫಲರಾದರು. ಸೋಹನ್ ಲಾಲ್ ಗೆ ತೀವ್ರ ರಕ್ತಸ್ರಾವವಾಗಿತ್ತು. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಏಮ್ಸ್ ಗೆ ದಾಖಲಿಸಲಾಯಿತು ಎಂದು ಪೊಲೀಸ್ ಮೂಲಗಳು ವರದಿ ಮಾಡಿದೆ.