Advertisement

JNU ಹಿಂಸಾಚಾರ: ಐಶೆ ಘೋಷ್ ಸಹಿತ ಎಂಟು ಮಂದಿ ಶಂಕಿತರ ಪಟ್ಟಿ ಬಿಡುಗಡೆ

10:23 AM Jan 11, 2020 | Team Udayavani |

ನವದೆಹಲಿ: ಕಳೆದ ಭಾನುವಾರ ಜವಹರಲಾಲ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಮಂದಿ ಶಂಕಿತರ ಪಟ್ಟಿಯನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ರವಿವಾರ ಮಧ್ಯಾಹ್ನ ಪೆರಿಯಾರ್ ಹಾಸ್ಟೆಲ್ ನಲ್ಲಿ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದ ಶಂಕಿತರ ಪಟ್ಟಿ ಇದಾಗಿದೆ.

Advertisement

ಇವರಲ್ಲಿ ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥೆ ಐಶೆ ಘೋಷ್ ಅವರ ಹೆಸರೂ ಸೇರಿದೆ. ಘರ್ಷಣೆಯಲ್ಲಿ ಮುಸುಕುಧಾರಿ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದ ಐಶೆ ಘೋಷ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪೋಲಿಸರು ಗುರುತಿಸಿರುವ ಶಂಕಿತರಲ್ಲಿ ಹೆಚ್ಚಿನವರು ಎಡಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದವರಾಗಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ (ಕ್ರೈಂ) ಜಾಯ್ ತಿರ್ಕೆ ಅವರು ಶಂಕಿತರ ಹೆಸರು ಮತ್ತು ಅವರ ಭಾವಚಿತ್ರಗಳನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಘರ್ಷಣೆ ಸಂಭವಿಸುವುದಕ್ಕೂ ಒಂದು ದಿನ ಮೊದಲೇ ಸರ್ವರ್ ಕೊಠಡಿಯನ್ನು ಹಾನಿಗೊಳಿಸಿ ಪುಡಿಗೈಯಲಾಗಿತ್ತು ಎಂಬ ಮಾಹಿತಿಯನ್ನು ತಿರ್ಕೆ ಅವರು ಇದೆ ಸಂದರ್ಭದಲ್ಲಿ ನೀಡಿದರು.

ಶಂಕಿತರ ಹೆಸರುಗಳು ಈ ರೀತಿಯಾಗಿವೆ:
1. ಐಶೆ ಘೋಷ್ – ಜೆ.ಎನ್.ಎಸ್.ಯು. ಅಧ್ಯಕ್ಷೆ, 2. ವಿಕಾಸ್ ಪಟೇಲ್ – ಎಂ.ಎ. ಕೊರಿಯನ್ ಸ್ಟಡೀಸ್, 3. ಪಂಕಜ್ ಮಿಶ್ರಾ – ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, 4. ಚುಂಚುನ್ ಕುಮಾರ್ – ಜೆ.ಎನ್.ಯು. ಹಳೇ ವಿದ್ಯಾರ್ಥಿ, 5. ಯೋಗೇಂದ್ರ ಭಾರದ್ವಜ್ – ಸಂಸ್ಕೃತ ಪಿ.ಹೆಚ್.ಡಿ. ವಿದ್ಯಾರ್ಥಿ, 6. ಡೋಲನ್ ಸಮನಾಟ – ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, 7. ಸುಚೇತಾ ತಾಲೂಕ್ದಾರ್ – ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, 8. ಪ್ರಿಯಾ ರಂಜನ್ – ಸ್ಕೂಲ್ ಆಫ್ ಲ್ಯಾಂಗ್ವೇಜ್ ಆ್ಯಂಡ್ ಕಲ್ಚರಲ್ ಸ್ಟಡೀಸ್


ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ವಶಕ್ಕೆ ಪಡೆದುಕೊಂಡಿಲ್ಲ ಮತ್ತು ಶಂಕಿತರೆಲ್ಲರಿಗೂ ನೊಟೀಸ್ ನೀಡಿ ಅವರಿಂದ ವಿವರಣೆಯನ್ನು ಪಡೆದುಕೊಳ್ಳಲಾಗುವುದು ಎಂದು ಡಿಸಿಪಿ ಜಾಯ್ ತಿರ್ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಶಂಕಿತರ ಹೆಸರುಗಳನ್ನು ಬಹಿರಂಗಪಡಿಸುವ ಸುಳಿವನ್ನು ಡಿಸಿಪಿ ಅವರು ನೀಡಿದ್ದಾರೆ.

Advertisement

ಆದರೆ ರವಿವಾರ ಸಾಯಂಕಾಲ ಜೆ.ಎನ್.ಯು. ಆವರಣದೊಳಗೆ ದಾಂಧಲೆ ನಡೆಸಿದ್ದ ಮುಸುಕುಧಾರಿಗಳ ಗುರುತು ಪತ್ತೆಯಾಗಿದೆಯೇ ಎಂಬ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಶಂಕಿತರ ಪಟ್ಟಿಯಲ್ಲಿ ತನ್ನ ಹೆಸರು ಉಲ್ಲೇಖವಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಐಶೆ ಘೋಷ್ ಅವರು, ‘ದೆಹಲಿ ಪೊಲೀಸರು ಅವರ ತನಿಖೆಯನ್ನು ನಡೆಸಲಿ, ನನ್ನ ಮೇಲೆ ದಾಳಿ ನಡೆದಿರುವುದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next