ಹೊಸದಿಲ್ಲಿ : ಸುಪ್ರೀಂ ಕೋರ್ಟ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ದಿಲ್ಲಿ ಪೊಲೀಸ್ ದಳದ ಹೆಡ್ ಕಾನ್‌ಸ್ಟೆಬಲ್ ಓರ್ವರು ಕೋರ್ಟಿನ ಆವರಣದೊಳಗೆ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬಂದಿಯನ್ನು ಚಾಂದ್‌ಪಾಲ್ ಎಂದು ಗುರುತಿಸಲಾಗಿದೆ. ಇವರು ಇಂದು ಸೋಮವಾರ ಬೆಳಗ್ಗೆ 8.15ರ ಹೊತ್ತಿಗೆ ಕೋರ್ಟ್ ಆವರಣದೊಳಗೆ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚಾಂದ್‌ಪಾಲ್ ಅವರ ಡ್ನೂಟಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಇತ್ತು. 2014ರ ಎಪ್ರಿಲ್‌ನಿಂದ ಇವರನ್ನು ಸುಪ್ರೀಂ ಕೋರ್ಟ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಆತ್ಮಹತ್ಯೆಯ ಕಾರಣವೇನು ಎಂಬುದು ಈ ವರೆಗೆ ಗೊತ್ತಾಗಿಲ್ಲ. ಸ್ಥಳಕ್ಕೆ ಕ್ರೈಮ್ ಹಾಗೂ ಫೊರೆನ್ಸಿಕ್ ತಂಡದವರು ಭೇಟಿ ಕೊಟ್ಟಿದ್ದಾರೆ.
ಪೊಲೀಸರು ಚಾಂದ್ ಪಾಲ್ ಅವರ ಮನೆಯವರನ್ನು ಹಾಗೂ ಸಹೋದ್ಯೋಗಿಗಳನ್ನು ಘಟನೆಯ ಸಂಬಂಧ ಪ್ರಶ್ನಿಸಲಿದ್ದಾರೆ ಮತ್ತು ಆ ಮೂಲಕ ಆತ್ಮಹತ್ಯೆಯ ಕಾರಣವನ್ನು ತಿಳಿಯಲು ಯತ್ನಿಸಲಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.