Advertisement

Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ

12:12 PM May 06, 2024 | Team Udayavani |

ಹೊಸದಿಲ್ಲಿ: ಭಾರತದಾದ್ಯಂತ ಅಡುಗೆ ಮನೆಗಳಲ್ಲಿ ಪ್ರತಿದಿನ ಬಳಸಲಾಗುವ ಮಸಾಲೆಗಳಲ್ಲಿ ಕೀಟನಾಶಕಗಳ ಇರುವ ಬಗ್ಗೆ ಚರ್ಚೆ ವೇಗ ಪಡೆಯುತ್ತಿರುವಂತೆ ದೆಹಲಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಮಸಾಲೆ ತಯಾರಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

Advertisement

ರಾಷ್ಟ್ರ ರಾಜಧಾನಿಯ ಕರವಾಲ್ ನಗರದಲ್ಲಿರುವ ಎರಡು ಕಾರ್ಖಾನೆಗಳಲ್ಲಿ ತಯಾರಾಗುತ್ತಿದ್ದ 15 ಟನ್‌ಗೂ ಹೆಚ್ಚು ಕಲಬೆರಕೆ ಮಸಾಲೆ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ದಿಲೀಪ್ ಸಿಂಗ್ (46), ಸರ್ಫರಾಜ್ (32) ಮತ್ತು ಖುರ್ಷಿದ್ ಮಲಿಕ್ (42) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಇದರ ಮಾಲಿಕರಾಗಿದ್ದಾರೆ.

ದೆಹಲಿ ಪೊಲೀಸರ ಅಪರಾಧ ವಿಭಾಗವು ಕರವಾಲ್ ನಗರದಲ್ಲಿರುವ ಎರಡು ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ್ದು, ಕಲಬೆರಕೆ ಅಕ್ಕಿ, ಮರದ ಪುಡಿ ಮತ್ತು ಮಸಾಲೆ ತಯಾರಿಸಲು ಬಳಸುವ ರಾಸಾಯನಿಕಗಳನ್ನು ವಶಪಡಿಸಿಕೊಂಡಿದೆ.

ಈ ಘಟಕಗಳಲ್ಲಿ ತಯಾರಾಗುತ್ತಿದ್ದ ಮಸಾಲೆ ಪದಾರ್ಥಗಳು ಕೇವಲ ದೆಹಲಿಯ ಲೋಕಲ್ ಮಾರುಕಟ್ಟೆ ಮಾತ್ರವಲ್ಲದೆ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ದಲ್ಲಿಯೂ ಸರಬರಾಜಾಗುತ್ತಿತ್ತು. ಅಸಲಿ ಮಸಾಲೆ ಪದಾರ್ಥಗಳ ಬೆಲೆಯನ್ನು ಇವರೂ ನಿಗದಿಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದೆಹಲಿ ಕ್ರೈಮ್ ಬ್ರ್ಯಾಂಚ್ ಡಿಸಿಪಿ ರಾಕೇಶ್ ಪವೆರಿಯಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಆರೋಪಿಗಳು ಕಲಬೆರಕೆ ಅಕ್ಕಿ, ಎಲೆಗಳು, ಹಾಳಾದ ಧಾನ್ಯಗಳು, ಮರದ ಪುಡಿ, ಮೆಣಸಿನಕಾಯಿ ತೊಟ್ಟುಗಳು, ಆಸಿಡ್ ಮತ್ತು ರಾಸಾಯನಿಕಗಳನ್ನು ಬಳಸುತ್ತಿದ್ದರು ಎಂದಿದ್ದಾರೆ.

ದಾಳಿಯ ಸಮಯದಲ್ಲಿ, ಸಿಂಗ್ ಮತ್ತು ಸರ್ಫರಾಜ್ ಪರಾರಿಯಾಗಲು ಪ್ರಯತ್ನಿಸಿದರು ಆದರೆ ಬಂಧಿಸಲಾಯಿತು. ವಿಚಾರಣೆ ವೇಳೆ, ಸಿಂಗ್ ಉತ್ಪಾದನಾ ಘಟಕದ ಮಾಲೀಕನಾಗಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ, ಮಲಿಕ್ ಕಲಬೆರಕೆ ಮಸಾಲೆಗಳನ್ನು ಪೂರೈಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಕರವಾಲ್ ನಗರದ ಕಾಳಿ ಖಾತಾ ರಸ್ತೆಯಲ್ಲಿ ಮತ್ತೊಂದು ಸಂಸ್ಕರಣಾ ಘಟಕ ಇರುವುದು ತನಿಖೆಯ ವೇಳೆ ಬಹಿರಂಗವಾಯಿತು. ಅಲ್ಲಿ ಕಲಬೆರಕೆ ಮಸಾಲೆಗಳನ್ನು ತಯಾರಿಸುತ್ತಿದ್ದ ಸರ್ಫರಾಜ್ ನನ್ನು ಬಂಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next