ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.
ಪ್ರತಿಭಟನಾಕಾರರು ಇಂದು ವಿಶ್ವವಿದ್ಯಾನಿಲಯದ ಆವರಣದಿಂದ ದಕ್ಷಿಣ ದೆಹಲಿಯತ್ತ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಟಿಯರ್ ಗ್ಯಾಸ್ ಎಸೆದು ಲಾಠೀ ಚಾರ್ಜ್ ಸಹ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದೆ.
ಉದ್ರಿಕ್ತ ಪ್ರತಿಭಟನಾಕಾರರು ದೆಹಲಿ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಬೆಂಕಿ ನಂದಿಸಲು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದ ಅಗ್ನಿಶಾಮಕ ದಳದ ವಾಹನವನ್ನೂ ಕೂಡ ಪ್ರತಿಭಟನಾಕಾರರು ತಡೆದರು. ಈ ಘಟನೆಯಲ್ಲಿ ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಜಾಮಿಯಾ ವಿಶ್ವವಿದ್ಯಾನಿಲಯದ ಆವರಣದೊಳಕ್ಕೆ ನುಗ್ಗಿದ್ದಾರೆ. ಅನುಮತಿ ಇಲ್ಲದೇ ವಿವಿ ಕ್ಯಾಂಪಸ್ ಪ್ರವೇಶಿಸಿದ ಪೊಲೀಸರು ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಯಾಗಿರುವ ವಸೀಂ ಅಹಮ್ಮದ್ ಖಾನ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರು ಅಂತಾರಾಷ್ಟ್ರೀಯ ಮಾಧ್ಯಮ ವಕ್ತಾರೆಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಬಿಸಿ ಸುದ್ದಿಸಂಸ್ಥೆಯ ವರದಿಗಾರ್ತಿಯಾಗಿರುವ ಬುಶ್ರಾ ಶೇಖ್ ಎಂಬುವವರ ಮೇಲೆ ಪೊಲೀಸರು ಹಲ್ಲೆ ನಡೆಸಿ ಆಕೆಯ ಮೊಬೈಲ್ ಫೋನನ್ನು ಕಸಿದುಕೊಂಡಿದ್ದಾರೆ ಮತ್ತು ಈ ಕುರಿತಾಗಿ ವಿಚಾರಿಸಿದಾಗ ಆಕೆಯನ್ನು ಕೀಳು ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂದು ಬುಶ್ರಾ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಗಂಭೀರ ಆರೋಪವನ್ನು ಮಾಡಿದ್ದಾರೆ.
Related Articles
ಜಾಮಿಯಾ ವಿವಿ ಆವರಣ ಮತ್ತು ಇದರ ಸುತ್ತಮುತ್ತ ಪ್ರತಿಭಟನೆ ನಡೆಯುತ್ತಿರುವುದರಿಂದ ಸುಖ್ ದೇವ್ ವಿಹಾರ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಓಖ್ಲಾ ವಿಹಾರ್ ಮತ್ತು ಜಸೋಲಾ ವಿಹಾರ್ ನಿಲ್ದಾಣಗಳಲ್ಲಿ ಮೆಟ್ರೋ ರೈಲು ನಿಲುಗಡೆಯನ್ನು ದೆಹಲಿ ಮೆಟ್ರೋ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.