ನವದೆಹಲಿ: ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಪಕ್ಷದ ಇಬ್ಬರು ಮುಖಂಡರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ನವದೆಹಲಿ ಮತ್ತು ಗುರ್ಗಾಂವ್ ನಲ್ಲಿರುವ ಟ್ವಿಟರ್ ಕಚೇರಿಗೆ ದೆಹಲಿ ಪೊಲೀಸರು ಭೇಟಿ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ:ಇಂದು ಕೇಂದ್ರದಿಂದ ರಾಜ್ಯಕ್ಕೆ 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ : ಸುಧಾಕರ್
ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಈ ಪ್ರಕರಣದಲ್ಲಿ ನಾವು(ಕಾಂಗ್ರೆಸ್) ದೂರುದಾರರು. ಪೊಲೀಸರು ನಮ್ಮನ್ನು ದೂರುದಾರರನ್ನಾಗಿ ಕರೆದಿದ್ದಾರೆಯೇ ವಿನಃ, ಆರೋಪಿಯನ್ನಾಗಿ ಅಲ್ಲ. ತಿರುಚಿದ ಅಂಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಹೊರಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಂಟೆಂಟ್ ಮತ್ತು ದೂರುದಾರರ ಹೇಳಿಕೆಯನ್ನು ಪರಿಶೀಲಿಸಬೇಕಾಗಿದೆ ಎಂದು ತನಿಖಾಧಿಕಾರಿಗಳು ಬಯಸಿದ್ದಾರೆ. ಇದರರ್ಥ ದೂರುದಾರ ಆರೋಪಿ ಎಂದಲ್ಲ ಎಂಬುದಾಗಿ ತಿಳಿಸಿದೆ.
ಸಾಮಾನ್ಯ ಪ್ರಕ್ರಿಯೆಯಂತೆ ದೆಹಲಿ ಪೊಲೀಸರ ತಂಡ ಸಾಮಾಜಿಕ ಜಾಲತಾಣದ ಭಾಗವಾಗಿರುವ ಟ್ವಿಟರ್ ಇಂಡಿಯಾ ಕಚೇರಿಗೆ ಭೇಟಿ ನೀಡಿ ನೋಟಿಸ್ ಅನ್ನು ಜಾರಿಗೊಳಿಸಿದೆ ಎಂದು ಸರ್ಕಾರದ ಮೂಲಗಳು ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಚಿತ್ರಣವನ್ನು ಕೆಟ್ಟದಾಗಿ ಬಿಂಬಿಸುವ ಬಗ್ಗೆ ಕಾಂಗ್ರೆಸ್ ಕೆಲವು ಆರೋಪದ ದಾಖಲೆಗಳನ್ನು ಹಂಚಿಕೊಂಡಾಗ ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಆಕ್ಷೇಪ ಎತ್ತಿದ ನಂತರ ವಿವಾದ ಪ್ರಾರಂಭವಾಗಿತ್ತು ಎಂದು ವರದಿ ತಿಳಿಸಿದೆ.