ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದ ಇಬ್ಬರು ಜೈಶ್ ಎ ಮೊಹಮ್ಮದ್ ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿಲ್ಲಿಯ ಸರೈ ಕೇಲ್ ಖಾನ್ ನ ಮಿಲೇನಿಯಮ್ ಪಾರ್ಕ್ ಬಳಿ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಉಗ್ರರನ್ನು ಅಬ್ದುಲ್ ಲತೀಫ್ (22 ವ) ಮತ್ತು ಮೊಹಮ್ಮದ್ ಅಶ್ರಫ್ ಖತಾನಾ (20 ವ) ಎಂದು ಗುರುತಿಸಲಾಗಿದೆ. ಇವರಿಬ್ಬರು ಜಮ್ಮು ಕಾಶ್ಮೀರದ ನಿವಾಸಿಗಳಾಗಿದ್ದು, ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ.
ಇದನ್ನೂ ಓದಿ:ನಿತೀಶ್ ಸಂಪುಟದಲ್ಲಿ ಬಿಜೆಪಿ ಮೇಲುಗೈ; ಇಬ್ಬರು ಡಿಸಿಎಂ, ಸುಶೀಲ್ ಮೋದಿಗಿಲ್ಲ ಸಚಿವ ಸ್ಥಾನ
ಸೋಮವಾರ ರಾತ್ರಿ 10.15ರ ಸುಮಾರಿಗೆ ದಿಲ್ಲಿಯ ಸರೈ ಕೇಲ್ ಖಾನ್ ನ ಮಿಲೇನಿಯಮ್ ಪಾರ್ಕ್ ಬಳಿ ದಾಳಿ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರ ಮೂಲದವರಾದ ಇವರ ಬಳಿ ಎರಡು ಅರೆ- ಸ್ವಯಂವಾಲಿತ ಪಿಸ್ತೂಲುಗಳು ಮತ್ತು ಹತ್ತು ಜೀವಂತ ಗುಂಡುಗಳಿದ್ದವು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನ ಓರ್ವ ಉಗ್ರನನ್ನು ಬಂಧಿಸಿದ್ದ ಪೊಲೀಸರು, ಭಯೋತ್ಪಾದಕ ದಾಳಿಯೊಂದನ್ನು ತಪ್ಪಿಸಿದ್ದರು.