ಹೊಸದಿಲ್ಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದ ಪಿಚ್ ಪಂದ್ಯದ ಐದನೇ ದಿನ ಸ್ಪಿನ್ನರ್‌ಗಳಿಗೆ ಸ್ವಲ್ಪ ಕೂಡ ನೆರವು ನೀಡಲಿಲ್ಲ. ಹೀಗಾಗಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟರು.
ಅಂತಿಮ ದಿನದಾಟದಲ್ಲಿ ಸ್ಪಿನ್ನರ್‌ಗಳು ಕೇವಲ ಎರಡು ವಿಕೆಟ್ ಪಡೆಯಲಷ್ಟೇ ಶಕ್ತರಾದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 103 ಓವರ್ ಆಡಿದ್ದು ಅಶ್ವಿನ್ ಮತ್ತು ಜಡೇಜ 73 ಓವರ್ ಎಸೆದಿದ್ದು 207 ರನ್ ಬಿಟ್ಟುಕೊಟ್ಟಿದ್ದರು.
ಅವರಿಬ್ಬರು ಪಡೆದ ವಿಕೆಟ್ ಸಂಖ್ಯೆಯನ್ನು ಗಮನಿಸಿದರೆ ಅವರ ದಾಳಿ ಎಷ್ಟೊಂದು ಬಿಗುವಿನಿಂದ ಕೂಡಿದೆ ಎಂಬುದನ್ನು ತಿಳಿಯಬಹುದು. ಯಾವುದೇ ಎದುರಾಳಿಗೆ ಅವರಿಬ್ಬರ ದಾಳಿಯನ್ನು ಎದುರಿಸುವುದು ಅತ್ಯಂತ ಕಷ್ಟ. ಆದರೆ ಈ ಪಂದ್ಯದಲ್ಲಿ ಅವರಿಬ್ಬರಿಗೆ ಪಿಚ್ ಸ್ವಲ್ಪ ಕೂಡ ನೆರವು ನೀಡಲಿಲ್ಲ. ಏಶ್ಯ ಖಂಡದ ಪಿಚ್‌ಗಳಲ್ಲಿ ಐದನೇ ದಿನ ಬಹುತೇಕ ಎಲ್ಲ ಕಡೆ ಸ್ಪಿನ್ನರ್‌ಗಳಿಗೆ ನೆರವು ಸಿಗುತ್ತದೆ. ಆದರೆ ಇಲ್ಲಿ ಯಾವುದೇ ನೆರವು ಸಿಕ್ಕಿಲ್ಲ ಎಂದು ಪೂಜಾರ ತಿಳಿಸಿದರು.
ಸರಣಿಯುದ್ದಕ್ಕೂ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ನಮ್ಮ ಬೌಲರ್‌ಗಳು ಉತ್ತಮ ನಿರ್ವಹಣೆ ನೀಡಿದ್ದಾರೆ. ಬ್ಯಾಟ್ಸ್‌ಮನ್ ರನ್ ಗಳಿಸಿದ್ದಾರೆ. ಹಾಗಾಗಿ ಇಲ್ಲಿ ಸಾಕಷ್ಟು ಸಕರಾತ್ಮಕ ಅಂಶಗಳಿವೆ. ದಿಲ್ಲಿ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಲು ಬಯಸಿದ್ದೆವು. ಆದರೆ ಇದು ಡ್ರಾದಲ್ಲಿ ಅಂತ್ಯಗೊಂಡಿತು ಎಂದು ಪೂಜಾರ ಹೇಳಿದರು.