ಧೆಮಾಜಿ(ಅಸ್ಸಾಂ): ಸ್ವಾತಂತ್ರ್ಯದ ನಂತರ ದೇಶವನ್ನು ಹಲವು ದಶಕಗಳಷ್ಟು ಕಾಲ ಆಡಳಿತ ನಡೆಸಿದ ಸರ್ಕಾರಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದು, ಈ ರಾಜ್ಯಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇದನ್ನೂ ಓದಿ: ನಿಮ್ಮ ಪಾಕೆಟ್ ಖಾಲಿ ಮಾಡುವ ಮೂಲಕ ಮೋದಿ ಸರ್ಕಾರ ದೊಡ್ಡ ಕೆಲಸ ಮಾಡುತ್ತಿದೆ : ರಾಹುಲ್ ಗಾಂಧಿ
ಸ್ವಾತಂತ್ರ್ಯ ನಂತರ ಯಾರು ದಶಕಗಳ ಕಾಲ ಆಡಳಿತ ನಡೆಸಿದ್ದಾರೋ ಅವರು ದಿಸ್ಪುರ್ ಅನ್ನು ದೆಹಲಿಯಿಂದ ತುಂಬಾ ದೂರ ಇರಿಸಿದ್ದರು. ಇನ್ಮುಂದೆ ದಿಲ್ಲಿ ದೂರವಲ್ಲ, ಈಗ ನಿಮ್ಮ ಮನೆಬಾಗಿಲ ಬಳಿ ಇದೆ ಎಂದು ಅಸ್ಸಾಂನಲ್ಲಿ 3,300 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಈ ಹಿಂದಿನ ಸರ್ಕಾರಗಳು ಅಸ್ಸಾಂ ಉತ್ತರ ಭಾಗ ಪ್ರದೇಶಕ್ಕೆ ಮಲತಾಯಿ ಧೋರಣೆ ತೋರಿಸಿವೆ. ಅಷ್ಟೇ ಅಲ್ಲ ರಾಜ್ಯದ ಆರೋಗ್ಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಾಗಿ ಆರೋಪಿಸಿದರು.
ಮುಖ್ಯಮಂತ್ರಿ ಸರ್ಬಾನಂದಾ ಸೋನಾವಾಲ್ ನೇತೃತ್ವದ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮತೋಲನದಲ್ಲಿ ಅಸ್ಸಾಂ ಅಭಿವೃದ್ಧಿಗೆ ಹಲವಾರು ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.
ಅಸ್ಸಾಂ ಅಭಿವೃದ್ಧಿಗೆ ಟೀ, ಪ್ರವಾಸೋದ್ಯಮ, ಕೈಮಗ್ಗ, ಕರಕುಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು. ಕಾಂಗ್ರೆಸ್ ಮತ್ತು ಅಸ್ಸೋಂ ಗಣ ಪರಿಷದ್ ದೀರ್ಘಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದವು.