ಹೊಸದಿಲ್ಲಿ: ಪ್ರಸಕ್ತ ಸಾಲಿನ ಮುಂಗಾರು ದೇಶದ ರಾಜಧಾನಿ ಹೊಸದಿಲ್ಲಿಯನ್ನು ಪ್ರವೇಶಿಸಿದೆ. ಗುರುವಾರ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆಯಾಗಿ, ಪ್ರಸಕ್ತ ಸಾಲಿನ ಮೊದಲ ಮಳೆಯನ್ನು ತಂದಿದೆ. ಹೀಗಾಗಿ ಸತತ ಬಿಸಿಲ ಝಳದಿಂದ ಕೆಂಗೆಟ್ಟಿದ್ದ ಜನರಿಗೆ ತಂಪು ತಂದಂತಾಗಿದೆ.
ಆರು ಗಂಟೆಗಳ ಅವಧಿಯಲ್ಲಿ ಸಫ್ಜರ್‌ಜಂಗ್ ಪ್ರದೇಶದಲ್ಲಿ 110 ಮಿಲಿಮೀಟರ್ ಮಳೆಯಾಗಿದೆ. 14 ವರ್ಷಗಳಿಗೆ ಹೋಲಿಕೆ ಮಾಡಿದರೆ, ಜೂನ್ ತಿಂಗಳಲ್ಲಿ ಇದು ದಾಖಲೆಯಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಪ್ರಗತಿ ಮೈದಾನದ ಟನೆಲ್ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ. ದಿಲ್ಲಿ-ಗುರುಗ್ರಾಮ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಠಾಣೆ, ಆಸ್ಪತ್ರೆಗಳಿಗೆ ನುಗ್ಗಿದ ನೀರು: ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಪಾಟ್ನಾದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಪ್ರವಾಹದ ನೀರು ಆಸ್ಪತ್ರೆ, ಪೊಲೀಸ್ ಠಾಣೆಗಳಿಗೆ ನುಗ್ಗಿದೆ.
ಉತ್ತರಪ್ರದೇಶದಲ್ಲಿ: ರಾಜಧಾನಿ ಲಕ್ನೋ ಸಹಿತ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಶುರುವಾಗಿದೆ. ಲಖೀಂಪುರ್ ಖೇರಿ, ಘಾಜಿಪುರ, ದೇವರಿಯಾ, ವಾರಾಣಸಿ, ಪ್ರಯಾಗ್‌ರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಹರ್ಯಾಣಗಳ ರಾಜ್ಯಗಳ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಜು.8ರ ಒಳಗಾಗಿ ದೇಶಾದ್ಯಂತ ಮುಂಗಾರು ಮಳೆಯಾಗುತ್ತದೆ.