ಬೆಂಗಳೂರು/ನವದೆಹಲಿ:ಬರೋಬ್ಬರಿ ಐದು ತಿಂಗಳ ನಂತರ ಬೆಂಗಳೂರು, ದೆಹಲಿಯಲ್ಲಿ ಮೆಟ್ರೋ ರೈಲು ಸಂಚಾರ ಸೋಮವಾರ (ಸೆಪ್ಟೆಂಬರ್ 07, 2020)ದಿಂದ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಆರಂಭವಾಗಿದೆ.
ಯಾವುದೇ ರೋಗ ಲಕ್ಷಣ ಇಲ್ಲದ ಪ್ರಯಾಣಿಕರನ್ನು ಮಾತ್ರ ಮೆಟ್ರೋದೊಳಕ್ಕೆ ಬಿಡಲಾಗುತ್ತದೆ. ಅಲ್ಲದೇ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ವರದಿ ತಿಳಿಸಿದೆ. ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಅಲ್ಲದೇ ಮೆಟ್ರೋ ನಿಲ್ದಾಣದಲ್ಲಿ ಥರ್ಮಲ್ (ಉಷ್ಣಾಂಶ) ಪರೀಕ್ಷೆ ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ದೆಹಲಿ, ನೋಯ್ಡಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ ಲೈನ್ 1, ಜೈಪುರ್, ಹೈದರಾಬಾದ್, ಮಹಾ ಮೆಟ್ರೋ(ನಾಗ್ಪುರ್), ಕೋಲ್ಕತಾ, ಗುಜರಾತ್ ಮತ್ತು ಉತ್ತರಪ್ರದೇಶ ಮೆಟ್ರೋ ಅಧಿಕಾರಿಗಳು ಮೆಟ್ರೋ ಸಂಚಾರಕ್ಕೆ ಸಿದ್ಧತೆ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನಗದು ವ್ಯವಹಾರ ಮತ್ತು ಟೋಕನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಮಾರ್ಗಸೂಚಿ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದಲ್ಲಿ ಹೆಚ್ಚು ಜನ ಸಂದಣಿಯಾಗದಂತೆ ಹೆಚ್ಚು ಮೆಟ್ರೋ ರೈಲು ಸಂಚಾರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮೆಟ್ರೋ ತುಂಬಾ ಬೃಹತ್ ನೆಟ್ ವರ್ಕ್ ಹೊಂದಿದ್ದು, ಇದೀಗ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ. ಉತ್ತರ ದೆಹಲಿಯ ಸಮಯ್ ಪುರ್ ಬಾಡ್ಲಿ ಯಿಂದ ಹರ್ಯಾಣ ಗುರುಗ್ರಾಮದ ಹೂಡಾ ಸಿಟಿವರೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಮುಂದಿನ ಐದು ದಿನಗಳ ಬಳಿಕ ಇನ್ನುಳಿದ ಮಾರ್ಗಗಳಲ್ಲಿಯೂ ಮೆಟ್ರೊ ಸಂಚಾರ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು.