ದೆಹಲಿ: ಇನ್‌ಸ್ಟಾಗ್ರಾಮ್ ರೀಲ್ಸ್ ಗಾಗಿ ಜನನಿಬಿಡ ರಸ್ತೆಯಲ್ಲಿ ತನ್ನ ಕಾರನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬನಿಗೆ ದೆಹಲಿ ಟ್ರಾಫಿಕ್ ಪೊಲೀಸರು 36,000 ರೂಪಾಯಿ ದಂಡ ವಿಧಿಸಿ ಬಂಧಿಸಿದ್ದಾರೆ.
ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದು, ಪ್ರದೀಪ್ ಢಾಕಾ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರದೀಪ್ ಢಾಕಾ ಎಂಬಾತ ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ಫ್ಲೈಓವರ್‌ನಲ್ಲಿ ಜನದಟ್ಟಣೆಯ ಸಮಯದಲ್ಲಿ ಕಾರನ್ನು ನಿಲ್ಲಿಸಿ, ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಾನೆ. ಕಾರಿನ ಡೋರ್ ತೆರೆದು ವೇಗವಾಗಿ ವಾಹವನ್ನು ಓಡಿಸಿಕೊಂಡು ಹೋಗಿದ್ದಾರೆ. ಇದಲ್ಲದೆ ಪಶ್ಚಿಮ ವಿಹಾರ್‌ನಲ್ಲಿನ ಫ್ಲೈಓವರ್‌ನಲ್ಲಿ ವಾಹನವನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಗಳಿಗೆ ಬೆಂಕಿ ಹಂಚಿ ಅದರ ಮುಂದೆ ಪೋಸ್ ನೀಡಿದ್ದಾರೆ.
ರೀಲ್ಸ್ ಅಪ್ಲೋಡ್ ಮಾಡಿದ ಬಳಿಕ ಪೊಲೀಸರು ವಿಡಿಯೋ ಆಧಾರದ ಮೇಲೆ ಕೃತ್ಯವೆಸಗಿದ ಪ್ರದೀಪ್ ನನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಿ, 36,000 ರೂಪಾಯಿಯ ದಂಡವನ್ನು ವಿಧಿಸಿದ್ದಾರೆ.
ಪೊಲೀಸರ ಮೇಲೆ ಪ್ರದೀಪ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು,ಇದಕ್ಕಾಗಿಯೂ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರದೀಪ್ ಢಾಕಾ ತನ್ನ ಸೋಶಿಯಲ್ ಮೀಡಿಯಾ ಸ್ಟಂಟ್‌ಗಳಿಗೆ ಬಳಸುತ್ತಿದ್ದ ಕಾರು ಅವರ ತಾಯಿಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ವಾಹನದಲ್ಲಿ ಕೆಲವು ನಕಲಿ ಪ್ಲಾಸ್ಟಿಕ್ ಆಯುಧಗಳೂ ಪೊಲೀಸರಿಗೆ ಸಿಕ್ಕಿವೆ.