Advertisement

ದೆಹಲಿ ಕರ್ನಾಟಕ ಸಂಘ: ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ

03:07 PM Dec 06, 2017 | Team Udayavani |

ಮುಂಬಯಿ: ದೆಹಲಿ ಕರ್ನಾಟಕ ಸಂಘ ಈ ವರ್ಷದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಭಾಷಾ ಬಾಂಧವ್ಯ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮವು ಡಿ. 3 ರಂದು ನಡೆಯಿತು.

Advertisement

ಕಾರ್ಯಕ್ರಮಕ್ಕೆ ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ರಾಜೇಂದ್ರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದೆಹಲಿಯಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದ ರಂಗಕರ್ಮಿ, ಖ್ಯಾತ ಚಿತ್ರಕಲಾವಿದ ಚೆನ್ನು ಎಸ್‌. ಮಠದ, ಖ್ಯಾತ ಹೊಟೇಲು ಉದ್ಯಮಿ ಮತ್ತು ಸಮಾಜ ಸೇವಕರಾದ  ಶೇಖರ್‌ ಎನ್‌. ಬಂಗೇರ, ಸೌಜನ್ಯಾ ಪ್ರಿಂಟಿಂಗ್‌ ಪ್ರಸ್‌ನ ಮಾಲೀಕ ವೈಜನಾಥ್‌ ಎನ್‌. ಹೆಗಡೆ ಅವರಿಗೆ ವಿಶಿಷ್ಟ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾದ  ರಾಜೇಂದ್ರ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಚಿಂತಕ, ಧೀಮಂತ ನಾಯಕ ದಿ| ಜೆ. ಎಚ್‌. ಪಟೇಲ್‌ ಅವರು ಸಂಸತ್ತಿನಲ್ಲಿ 1967, ಡಿಸೆಂಬರ್‌ 4ರಂದು ಮಾರ್ದನಿಸಿದ ಕನ್ನಡ ಕಹಳೆ ಐವತ್ತು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಕನ್ನಡದ ಕಹಳೆಗೆ 50ರ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದು ಕನ್ನಡಿಗರಿಗೆ ಅತ್ಯಂತ ಅಭಿಮಾನದ ಸಂಗತ್ತಿ ಮಾತ್ರವಲ್ಲ  ಸಂಭ್ರಮಾಚರಣೆಯ ಸಂಗತಿಕೂಡ ಹೌದು. ಕಾರಣ ಹಿಂದಿಯನ್ನು ಬಿಟ್ಟರೆ ಉಳಿದೆಲ್ಲ ಭಾರತೀಯ ಭಾಷೆಗಳಲ್ಲಿಯೇ ಮೊದಲ ಬಾರಿಗೆ ಕನ್ನಡದ ಧ್ವನಿ ಕೇಳಿಸಿದ್ದು ಪಟೇಲರಿಂದ. ಸಂಸತ್ತಿನಲ್ಲಿ ಪಟೇಲ್‌ ಕುರಿತು ಚಂದ್ರಶೇಖರ್‌ಎನ್‌. ಪಿ. ಅವರು ವಿಶೇಷವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಅನಂತರ ಸ್ಥಳೀಯ ಕಲಾವಿದರಿಂದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ದೆಹಲಿಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next