Advertisement

ದೆಹಲಿ ಕರ್ನಾಟಕ ಸಂಘ: ಶತಮಾನದ ನೆನಪು 

12:31 PM Sep 28, 2017 | Team Udayavani |

ಮುಂಬಯಿ: ಸಾಹಿತಿಗಳಾದ  ಎಂ.ಕೆ.ಇಂದಿರಾ ಹಾಗೂ ತ್ರಿವೇಣಿ ಅವರು ಸಮಕಾಲೀನರು. ಆದರೆ ತ್ರಿವೇಣಿ ಅವರ ಬರಹಕ್ಕೆ ಸಿಕ್ಕಿದಷ್ಟು ಪ್ರಾಶಸ್ತ್ಯ , ಪ್ರಚಾರ ಇಂದಿರಾ ಅವರ ಬರಹಕ್ಕೆ ಸಿಗದಿರುವುದು ಬೇಸರದ ಸಂಗತಿ. ಇಂದಿರಾ ಅವರ ಸುಮಾರು 60 ಕೃತಿಗಳಲ್ಲಿ ಮುಖ್ಯವಾಗುವುದು ಕೇವಲ ನಾಲ್ಕೈದು ಕೃತಿಗಳು ಮಾತ್ರವಾದರೂ ಈ ಕೃತಿಗಳಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅದರದ್ದೇ ಆದ ಅತ್ಯಂತ ಮಹತ್ವದ ಸ್ಥಾನವಿದೆ. ಅವರ ಫಣಿಯಮ್ಮ ಕನ್ನಡದ ಮಾತ್ರವಲ್ಲ, ಭಾರತದ ಮುಖ್ಯ ಕಾದಂಬರಿಯೂ ಹೌದು. 

Advertisement

ಇಂದಿರಾ ಅವರು ವಾಸ್ತವ ಬದುಕನ್ನು ಕಂಡು ಎಂದೂ ಕಂಗಾಲಾಗಿಲ್ಲ. ಹಾಗೆಯೇ ವಾಣಿಯವರ ಬರಹಗಳಲ್ಲಿ ಕೂಡ ಸ್ತ್ರೀವಾದದ ನೆಲೆಗಟ್ಟನ್ನು ಕಾಣಬಹುದು ಎಂದು ಖ್ಯಾತ ವಿಮರ್ಶಕಿ, ಚಿಂತಕಿಯಾದ ಡಾ| ಎಂ. ಎಸ್‌. ಆಶಾದೇವಿ ಅವರು ನುಡಿದರು.

ದೆಹಲಿ ಕರ್ನಾಟಕ ಸಂಘದ ವತಿಯಿಂದ ಸೆ.  24ರಂದು ಸಂಸ್ಥೆಯ ಸಭಾಗೃಹದಲ್ಲಿ ನಡೆದ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಂ. ಕೆ. ಇಂದಿರಾ ಹಾಗೂ ಕಥೆಗಾರ್ತಿ ವಾಣಿ ಅವರ ಶತಮಾನದ ನೆನಪು ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಎಲ್ಲ ಹೆಣ್ಣು ಮಕ್ಕಳು ಅವರ ಆಳದಲ್ಲಿ ಸ್ತ್ರೀವಾದಿಗಳಾಗಿರುತ್ತಾರೆ. ಪ್ರಜ್ಞಾವಂತ ಪುರುಷರು ಕೂಡ ಸ್ತ್ರೀವಾದಿಗಳೇ. ಇದು ಪಿತೃ ಸಂಸ್ಕೃತಿಯಷ್ಟೇ ಹಳೆಯದ್ದು. ಗಂಡು ಹೆಣ್ಣು ಒಟ್ಟಿಗೆ ಸೇರಿ ಕಟ್ಟಬೇಕಾದ ಲೋಕ ಮೀಮಾಂಸೆಯನ್ನು 
ಸ್ತ್ರೀವಾದ ಎನ್ನಬಹುದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರೇಣುಕಾ ನಿಡಗುಂದಿ ಅವರು ಮಾತನಾಡಿ, ಇಂದಿರಾ ಅವರ ಕೃತಿಗಳಲ್ಲಿ ಬದುಕಿನ ಭರವಸೆ ಇದೆ. ಅವರ ಪ್ರಮುಖ ಕೃತಿಯಾದ ಫಣಿಯಮ್ಮ ಕಾದಂಬರಿಯಲ್ಲಿ ಹೊಸಯುಗದ ಹರಿಕಾರರಾಗಿ ಫಣಿಯಮ್ಮ ಕಾಣುವರು. ಇವರಿಬ್ಬರ ಬರಹದಿಂದಾಗಿ ಮುಂದೆ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಬರಹಗಾರರಿಗೆ ಪ್ರೇರಣೆ ಮಾತ್ರವಲ್ಲ ಮಹತ್ವದ ಸ್ಥಾನ ದೊರೆಯಿತು ಎಂದರು.
ಡಾ| ಪುರುಷೋತ್ತಮ ಬಿಳಿಮಲೆ ಅವರು ಕೂಡಾ ಈ ಸಂದರ್ಭದಲ್ಲಿ ಮಾತನಾಡಿದರು. ಬಳಿಕ ಸಾಹಿತ್ಯಾಸಕ್ತರಿಂದ ವಿಚಾರ ಸಂಕಿರಣದ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ವಹಿಸಿದ್ದರು. 

ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ವಂದಿಸಿದರು.  ಜಮುನಾ 
ಸಿ. ಮಠದ ಕಾರ್ಯಕ್ರಮ ನಿರೂಪಿದರು. ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next