Advertisement

ದೆಹಲಿ :ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನೆ

04:48 PM Sep 09, 2017 | |

ಮುಂಬಯಿ: ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಶಿಕ್ಷಕರಿಂದಲೇ ನಡೆಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮೊದಲು ಶಿಕ್ಷಕರಿಗೆ ಸರಿಯಾದ ತರಬೇತಿ ನೀಡಿ ಮಾದರಿ ಶಿಕ್ಷಕರನ್ನು ರೂಪಿಸುವ ಅಗತ್ಯತೆ ಇದೆ. ಹಾಗಾದಾಗ ಶಿಕ್ಷಕರು ಮಕ್ಕಳನ್ನು ಉತ್ತಮ ರಾಷ್ಟ್ರ ಪ್ರಜೆಯಾಗಿಸಲು ಅಡಿಪಾಯ ಹಾಕಲು ಸಾಧ್ಯ. ಇಂದು ರಾಷ್ಟ್ರಪ್ರಶಸ್ತಿ ಪಡೆದಿರುವ ಎಲ್ಲಾ ಶಿಕ್ಷಕರು ಅವರಿಗೆ ಮಾದರಿಯಾಗಲಿ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ನುಡಿದರು.

Advertisement

ಸೆ. 5ರಂದು ದೆಹಲಿ ಕರ್ನಾಟಕ ಸಂಘದ ವತಿಯಿಂದ ಸಂಘದ ಸಭಾಗೃಹದಲ್ಲಿ ನಡೆದ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದ ಅವರು, ಈ ಬಾರಿ ಪ್ರಶಸ್ತಿ ಪಡೆದ ಕರ್ನಾಟಕದ 12 ಶಿಕ್ಷಕರೂ ಕೂಡಾ ಕನ್ನಡ ಮಾಧ್ಯಮದಲ್ಲಿ ಓದಿದವರು ಮತ್ತು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ. ಇದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ದೆಹಲಿ ಕರ್ನಾಟಕ ಸಂಘವು ರಾಷ್ಟ್ರಪ್ರಶಸ್ತಿ ಪಡೆದ ಕರ್ನಾಟಕದ ಶಿಕ್ಷಕರುಗಳಾದ ಅಶೋಕ್‌ ಕುಮಾರ್‌ ಮಂಡ್ಯ,  ಎಸ್‌. ಆರ್‌. ಅಚ್ಯುತ್‌ರಾವ್‌ ಚಿಕ್ಕಮಗಳೂರು, ಎಂ. ಕೃಷ್ಣಪ್ಪ, ಕೋಲಾರ, ಕುಮಾರ್‌ ಎಚ್‌. ಸಿ. ಶಿವಮೊಗ್ಗ,  ದಿವಾಕರ ಪರಮೇಶ್ವರ ಹೆಗಡೆ ಉತ್ತರ ಕನ್ನಡ, ರತ್ನಮ್ಮ ಬಿ. ಎಂ. ಆನೇಕಲ್‌,  ಎಚ್‌. ಗೋವಿಂದಪ್ಪ ಬಳ್ಳಾರಿ,  ಪುರಂದರ ನಾರಾಯಣ ಭಟ್‌, ದಕ್ಷಿಣ ಕನ್ನಡ, ಪಂಡಿತ್‌ ಕೆ. ಬಲ್ಲರೆ ಬೀದರ್‌, ಜಿ. ಎಂ. ಮಂಜುನಾಥ್‌ ಅವರನ್ನು ಅಭಿನಂದಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಹಾಗೂ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರಾಧ್ಯಾಪಕ ಡಾ| ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ದೇಶ ಇಂದು ಹೊಸ ಪೀಳಿಗೆಯ ನಿರ್ಮಾಣಕ್ಕಾಗಿ ಪ್ರತಿಭಾವಂತ ಪ್ರಾಧ್ಯಾಪಕರತ್ತ ನೋಡುತ್ತಿದೆ. ಅಂತಹ ಸಂದರ್ಭದಲ್ಲಿ ನಿಮ್ಮಂತಹ ಮಾದರಿ ಅಧ್ಯಾಪಕರುಗಳು ಇತರ ಅಧ್ಯಾಪಕರುಗಳಿಗೆ ಮಾದರಿಯಾಗುವುದರ ಜೊತೆಗೆ ಇಡೀ ನವ ಪೀಳಿಗೆಗೆ ಮಾರ್ಗದರ್ಶಿಯಾಗಬೇಕಾಗಿದೆ. ದೇಶಾದ್ಯಂತ ಇಂದು ಕಂಡು ಬರುತ್ತಿರುವ ಮಕ್ಕಳು ಮತ್ತು ನವಯುವಕರ ಆಸೆ-ಆಕಾಂಕ್ಷೆಗಳಿಗೆ ಕುತೂಹಲ ಮತ್ತು ಅನ್ವೇಷಣಾ ಸೃಷ್ಟಿಗೆ ನೀವು ಪೂರಕವಾದ ವಾತಾವರಣವನ್ನು ಸೃಷ್ಟಿಸಿ ದೇಶವನ್ನು ಮತ್ತು ಸಮಸ್ತ ಜನಕೋಟಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದು ಭವ್ಯ ಭವಿಷ್ಯ ಸೃಷ್ಟಿಸಬೇಕಾಗಿದೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು. ಪ್ರೊ| ಸಖಾರಾಮ ಉಪ್ಪೂರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು  ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next