Advertisement
ರಾಷ್ಟ್ರ ರಾಜಧಾನಿ ದೆಹಲಿಯ ಹೃದಯ ಭಾಗ ಲೋದಿ ಎಸ್ಟೇಟ್‌ನಲ್ಲಿದ್ದ ದೆಹಲಿ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ನಡೆಸುವ ಶಾಲೆಯಲ್ಲಿ ತೃತೀಯ ಭಾಷೆ ಕನ್ನಡ. ಆದರೆ, ಇಲ್ಲಿ ಕಲಿಯುವ ಮಕ್ಕಳಿಗೆ ಕನ್ನಡ ಪುಸ್ತಕಕ್ಕೆ ಹಣ ಕೊಟ್ಟರೂ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುವಲ್ಲಿ ವಿಳಂಬ ಮಾಡಲಾಗಿದೆ.
ಏಪ್ರಿಲ್‌ನಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಒಂದು ತಿಂಗಳ ತರಗತಿ ನಡೆಸಿ ಮೇ ನಲ್ಲಿ ರಜೆ ನೀಡುವುದು ಇಲ್ಲಿನ ವಾಡಿಕೆ. ಮರಳಿ ಜುಲೈನಲ್ಲಿ ಮತ್ತೆ ತರಗತಿಗಳು ಆರಂಭವಾಗುತ್ತವೆ. ತರಗತಿಗಳು ಆರಂಭವಾಗಿ 3 ತಿಂಗಳಾದರೂ ಪಠ್ಯಪುಸ್ತಕಗಳ ಸುಳಿವೇ ಇಲ್ಲ. ಎಷ್ಟೋ ಸಲ ಕರ್ನಾಟಕದಿಂದ ಪಠ್ಯದ ಝೆರಾಕ್ಸ್ ತರಿಸಿ ಪಾಠ ಮಾಡಿದ್ದೂ ಇದೆ. ಮಕ್ಕಳಿಗೆ ಪ್ರತಿವರ್ಷ ಅಕ್ಟೋಬರ್ ವೇಳೆಗೆ ಮುಂದಿನ ಶೈಕ್ಷಣಿಕ ಪಠ್ಯ ಪೂರೈಸುವಂತೆ ಶಿಕ್ಷಣ ಇಲಾಖೆ ನೇತೃತ್ವದ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಮನವಿ ಮಾಡಿಕೊಂಡು ಹಣ ಪಾವತಿಸಿದರೂ ಬರೋದು ವಿಳಂಬವೇ.
Related Articles
ಕರ್ನಾಟಕದಲ್ಲಿ ಉಚಿತವಾಗಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುತ್ತಾರೆ. ಆದರೆ, ಹೊರನಾಡ ಶಾಲೆಗಳಿಗೆ ಅಲ್ಲಿನ ಸರ್ಕಾರದ ಮೂಲಕ ಅರ್ಜಿ ಕಳಿಸಿದರೂ ಹಣ ಪಡೆಯುತ್ತಾರೆ. ಹೊರನಾಡ ಕನ್ನಡಿಗರಿಗೆ ಉಚಿತ ಪುಸ್ತಕವನ್ನಾದರೂ ನೀಡಿ ಕನ್ನಡಾಭಿಮಾನ ಉಳಿಸಬೇಕಾದ್ದು ಕರ್ತವ್ಯ. ಉತ್ತರ ಭಾರತದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಅವರ ಮಕ್ಕಳಿಗೆ ಕನ್ನಡ ಕಲಿಸುವ ಅಗತ್ಯವಿದೆ ಎನ್ನುತ್ತಾರೆ ಜೆಎನ್‌ಯು ಪ್ರಾಧ್ಯಾಪಕ ವೆಂಕಟಾಚಲ ಹೆಗಡೆ.
Advertisement
30 ಸಾವಿರಕ್ಕೂ ಅಧಿಕ: 1 ರಿಂದ 10ನೇ ತರಗತಿ ತನಕ ಪಠ್ಯಪುಸ್ತಕ ಎಷ್ಟೆಷ್ಟು ಎಂದು ಪಟ್ಟಿ ನೀಡಿ, ಪ್ರತಿ ಪುಸ್ತಕಕ್ಕೆ ಈ ವರ್ಷ 43 ರಿಂದ 47 ರೂ.ತನಕ ಹಣ ಪಾವತಿಸಬೇಕು. ಇದರ ಮೊತ್ತವೇ ಕನಿಷ್ಠ 30 ರಿಂದ 50 ಸಾವಿರ ರೂ.ಆಗಲಿದೆ. ಈ ಮಧ್ಯೆ, ಇರುವ ಇಷ್ಟೂ ಮಕ್ಕಳಿಗೆ ಪಾಠ ಮಾಡಲು ಒಬ್ಬರೇ ಕನ್ನಡ ಶಿಕ್ಷಕರಿದ್ದಾರೆ. ಅವರು ರಜೆ ಹೋದರೆ ಸಮಸ್ಯೆ ಉಂಟಾಗುತ್ತದೆ. ಕರ್ನಾಟಕ ಸರ್ಕಾರವೇ ಕನಿಷ್ಠ ಇಬ್ಬರನ್ನಾದರೂ ಕನ್ನಡ ಶಿಕ್ಷಕರನ್ನೂ ಕಳಿಸಿಕೊಟ್ಟರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಶಾಲಾ ಆಡಳಿತ ಮಂಡಳಿ ಖಜಾಂಚಿ ಹನುಮೇಗೌಡರು. ಬಿಎಸ್‌ವೈ ಕೋಟಿ ಕೊಟ್ಟೇ ಇಲ್ಲ:
ಇದೇ ಶಾಲಾಭಿವೃದ್ಧಿಯಿಂದ ಗುರಗಾಂವ್ ಕನ್ನಡ ಸಂಘದಲ್ಲಿ 43 ಮಕ್ಕಳಿಗೆ ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಪ್ರತಿ ತಿಂಗಳು 10 ಸಾವಿರ ರೂ.ಇದೇ ಶಾಲೆಯಿಂದ ಕೊಟ್ಟು ಕನ್ನಡ ಪ್ರೀತಿಯನ್ನು ಆಡಳಿತ ಮಂಡಳಿ ಮೆರೆಯುತ್ತಿದೆ. ಏತನ್ಮಧ್ಯೆ, ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2011ರಲ್ಲಿ ಮಂಜೂರಾತಿ ಮಾಡಿದ್ದ 1 ಕೋಟಿ ರೂ. ಅನುದಾನ ಇನ್ನೂ ಕೊಟ್ಟೇ ಇಲ್ಲ. ಶೈಕ್ಷಣಿಕ ಸಮುತ್ಛಯ ನಿರ್ಮಾಣದ ಕನಸು ಇನ್ನೂ ಈಡೇರಿಯೇ ಇಲ್ಲ. ದೆಹಲಿಯಲ್ಲಿ ಕನ್ನಡ ಶಾಲೆಗೆ ವಿಶೇಷ ಆದ್ಯತೆ ಕೊಟ್ಟು ಮೆರೆಸಬೇಕಿದ್ದ ಸರ್ಕಾರ ಜಾಣ ಕುರುಡಾಗಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ದೆಹಲಿಯ ಏಕೈಕ ಕನ್ನಡ ಶಾಲೆಗೆ ಕನ್ನಡ ಪುಸ್ತಕಗಳಿಗೆ ಹಣ ಕೊಟ್ಟರೂ ಸಮಯಕ್ಕೆ ಸರಿಯಾಗಿ ಬರದೇ ಇರುವುದು ನಮಗೆ ನೋವಾಗುತ್ತಿದೆ. ದೆಹಲಿ ಕನ್ನಡಿಗರಿಗೆ ಕನ್ನಡ ಶಾಲೆ, ಕನ್ನಡ ಸಂಘ ಎರಡು ಕಣ್ಣುಗಳು. ಸರ್ಕಾರ ಶಾಲೆಗೆ ಬಜೆಟ್ ಮೂಲಕವಾದರೂ ವಿಶೇಷ ಆದ್ಯತೆ ಕೊಡಲಿ.
– ಹನುಮೇಗೌಡ್ರು, ಖಜಾಂಚಿ, ದೆಹಲಿ ಕನ್ನಡ ಶಾಲೆ. ಸರ್ಕಾರಿ ಶಾಲೆ ಸಬಲೀಕರಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಪಠ್ಯಪುಸ್ತಕವನ್ನು ಶಾಲಾರಂಭದ ತಿಂಗಳು ಮೊದಲೇ ಮುಂದಿನ ಶೈಕ್ಷಣಿಕ ವರ್ಷದಿಂದ ನೀಡುವಂತೆ ಸೂಚಿಸಿದ್ದೇವೆ. ಹೊರನಾಡ ಶಾಲೆಗಳಿಗೂ ಸಕಾಲಕ್ಕೆ ಪಠ್ಯ ಪುಸ್ತಕ ಪೂರೈಸುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕು.
– ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. – ರಾಘವೇಂದ್ರ ಬೆಟ್ಟಕೊಪ್ಪ