Advertisement

ನಿರ್ಮಾಣಗೊಳ್ಳಲಿದೆ ದೇಶದ ಮೊದಲ ಎಲೆಕ್ಟ್ರಿಕ್‌ ಹೈವೇ

04:29 PM Oct 12, 2021 | Team Udayavani |

ದೇಶದಲ್ಲೇ ಮೊದಲ ಎಲೆಕ್ಟ್ರಿಕ್‌ ಹೈವೇ ನಿರ್ಮಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಇದು ಹೊಸದಿಲ್ಲಿಯಿಂದ ಜೈಪುರವನ್ನು ಸಂಪರ್ಕಿಸಲಿದೆ. ಕಡಿಮೆ ವೆಚ್ಚ  ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುವ ಎಲೆಕ್ಟ್ರಿಕ್‌ ವಾಹನಗಳ ಸಂಚಾರಕ್ಕಾಗಿಯೇ ಈ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್‌ ವಾಹನಗಳನ್ನು ಉತ್ತೇಜಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ.

Advertisement

ಎಲೆಕ್ಟ್ರಿಕ್‌ ಹೈವೇ ಎಂದರೇನು?
ಎಲೆಕ್ಟ್ರಿಕ್‌ ವಾಹನಗಳ ಸಂಚಾರಕ್ಕೆಂದೇ ನಿರ್ಮಿಸಲಾಗುವ ಹೆದ್ದಾರಿ ಇದಾಗಿದೆ. ಸಾಮಾನ್ಯವಾಗಿ ವಿದ್ಯುತ್‌ ಚಾಲಿತ ರೈಲುಗಳ ಸಂಚಾರಕ್ಕಾಗಿ ಹಳಿಗಳ ಮೇಲ್ಭಾಗದಲ್ಲಿ ವಿದ್ಯುತ್‌ ತಂತಿಯನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲಿನ ಎಂಜಿನ್‌ಗೆ ವಿದ್ಯುತ್‌ ಸಂಪರ್ಕದ  ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಈ ಮೂಲಕ ರೈಲುಗಳು ಸಂಚರಿಸುತ್ತವೆ.  ಅದೇ ರೀತಿ ಹೆದ್ದಾರಿಯಲ್ಲಿ  ವಿದ್ಯುತ್‌ ತಂತಿಗಳನ್ನು ಅಳವಡಿಸಲಾಗುತ್ತದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಈ ತಂತಿಗಳಿಂದ ವಿದ್ಯುತ್‌ ಪಡೆಯುತ್ತವೆ. ಇದನ್ನು ಇ- ಹೆದ್ದಾರಿ ಅಂದರೆ ಎಲೆಕ್ಟ್ರಿಕ್‌ ಹೈವೇ ಎಂದು ಕರೆಯಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಲು ಹೆದ್ದಾರಿಯ ಅಲ್ಲಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳೂ ಇರುತ್ತವೆ.

ಕಾರ್ಯನಿರ್ವಹಣೆ ಹೇಗೆ?
ಪ್ರಪಂಚದಾದ್ಯಂತ ಇ- ಹೆದ್ದಾರಿಗಳಿಗೆ ಮೂರು ರೀತಿಯ ತಂತ್ರಜಾnನಗಳನ್ನು ಬಳಸಲಾಗುತ್ತದೆ. ಭಾರತ ಸರಕಾರ ಸ್ವೀಡಿಷ್‌ ಕಂಪೆನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದರಿಂದ ಸ್ವೀಡನ್‌ನಲ್ಲಿ ಬಳಸುವ ತಂತ್ರಜಾnನ ವನ್ನೇ ಭಾರತದಲ್ಲೂ ಬಳಸುವ ಯೋಚನೆ ಇದೆ ಎನ್ನಲಾಗುತ್ತಿದೆ.

ಸ್ವೀಡನ್‌ನಲ್ಲಿ ಪ್ಯಾಂಟೋಗ್ರಾಫ್ ಮಾದರಿಯನ್ನು ಬಳಸಲಾಗುತ್ತದೆ. ಇದನ್ನೇ ಭಾರತದ ರೈಲುಗಳಲ್ಲಿಯೂ ಬಳಸಲಾಗುತ್ತಿದೆ. ಇದರಲ್ಲಿ ರಸ್ತೆಯ ಮೇಲ್ಗಡೆ ತಂತಿಗಳನ್ನು ಅಳವಡಿಸಿ ಅದರಲ್ಲಿ ವಿದ್ಯುತ್‌ ಹರಿಯುವಂತೆ ಮಾಡಲಾಗುತ್ತದೆ. ಈ ವಿದ್ಯುತ್‌ ಅನ್ನು ಪ್ಯಾಂಟೋಗ್ರಾಫ್ ಮೂಲಕ ವಾಹನಕ್ಕೆ ಸರಬರಾಜು ಮಾಡಲಾಗುತ್ತದೆ. ಇದರಿಂದ ವಿದ್ಯುತ್‌ ನೇರವಾಗಿ ಎಂಜಿನ್‌ ಅನ್ನು ಶಕ್ತಗೊಳಿಸುತ್ತದೆ ಅಥವಾ ವಾಹನದಲ್ಲಿರುವ ಬ್ಯಾಟರಿಯನ್ನು ಜಾರ್ಜ್‌ ಮಾಡುತ್ತದೆ.

ಇದರ ಹೊರತಾಗಿ ವಾಹಕ ಮತ್ತು ಇಂಡಕ್ಷನ್‌ ಮಾದರಿಗಳನ್ನೂ ಬಳಸಲಾಗುತ್ತದೆ. ವಾಹಕ ಮಾದರಿಯಲ್ಲಿ ತಂತಿಯನ್ನು ರಸ್ತೆಯೊಳಗೆ ಅಳವಡಿಸಿ ಅದರ ಮೇಲೆ ವಾಹನಗಳು ಚಲಿಸಿದಾಗ ಪ್ಯಾಂಟೋಗ್ರಾಫ್ ಮೂಲಕ ವಿದ್ಯುತ್‌ ವಾಹನದ ಎಂಜಿನ್‌ಗೆ ಸರಬರಾಜಾಗಿ ವಾಹನ ಚಲಿಸುತ್ತದೆ. ಇಂಡಕ್ಷನ್‌ ಮಾದರಿಯಲ್ಲಿ ಯಾವುದೇ ತಂತಿ ಇರುವುದಿಲ್ಲ. ವಿದ್ಯುತ್ಕಾಂತೀಯ ಪ್ರವಾಹದ ಮೂಲಕ ವಾಹನಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ.

Advertisement

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

ಸ್ವೀಡನ್‌ ಮತ್ತು ಜರ್ಮನಿಯಲ್ಲಿ ಬಳಸಲಾಗುವ ಎಲೆಕ್ಟ್ರಿಕ್‌ ವಾಹನಗಳು ಹೈಬ್ರಿಡ್‌ ಎಂಜಿನ್‌ ಅನ್ನು ಹೊಂದಿವೆ. ಅವುಗಳನ್ನು ವಿದ್ಯುತ್‌, ಪೆಟ್ರೋಲ್‌ ಹಾಗೂ ಡೀಸೆಲ್‌ನಿಂದಲೂ ಚಲಾಯಿಸಬಹುದು.

ಎಲ್ಲಿ ನಿರ್ಮಾಣ ಆಗಲಿದೆ?
ದೇಶದ ಮೊದಲ ಎಲೆಕ್ಟ್ರಿಕ್‌ ಹೈವೇಯನ್ನು ಹೊಸದಿಲ್ಲಿ- ಜೈಪುರದ ನಡುವೆ ನಿರ್ಮಿಸಲಾಗುತ್ತದೆ. 200 ಕಿ.ಮೀ. ಉದ್ದದ ಈ ಹೆದ್ದಾರಿ ಹೊಸದಿಲ್ಲಿ- ಮುಂಬಯಿ ಎಕ್ಸ್‌ಪ್ರಸ್‌ ವೇ ಜತೆಗೆ ಹೊಸ ಪಥದಲ್ಲಿ ನಿರ್ಮಿಸಲಾಗುತ್ತಿದೆ. ಈ ಪಥಕ್ಕೆ ವಿದ್ಯುತ್‌ ಜೋಡಣೆಯಾಗಿರುವುದರಿಂದ  ವಿದ್ಯುತ್‌ ಚಾಲಿತ ವಾಹನಗಳು ಮಾತ್ರ ಇದರಲ್ಲಿ ಸಂಚರಿಸುತ್ತವೆ. ಈ ಕುರಿತು ಸ್ವೀಡಿಷ್‌  ಕಂಪೆನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಇದು ಸಂಪೂರ್ಣ ಸಿದ್ಧವಾದರೆ ದೇಶದ ಮೊದಲ ಇ- ಹೆದ್ದಾರಿ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ.

ಎಲೆಕ್ಟ್ರಿಕ್‌ ಹೈವೆ ಯಾವ ವಾಹನಗಳಿಗೆ?
ಸ್ವೀಡನ್‌ ಮತ್ತು ಜರ್ಮನಿಯಲ್ಲಿ ಎಲೆಕ್ಟ್ರಿಕ್‌ ಹೈವೆಯನ್ನು ಸಾರ್ವಜನಿಕ ಸಾರಿಗೆಗೆ ಬಳಸುವ ವಾಹನಗಳ ಸಾಗಾಣೆಗೆ ಮಾತ್ರ ಬಳಸಲಾಗುತ್ತದೆ. ಆದರೆ ಕಾರು, ಜೀಪ್‌ಗಳಂತಹ ವೈಯಕ್ತಿಕ ವಾಹನಗಳನ್ನೂ ಇದರಲ್ಲಿ ಚಲಾಯಿಸಬಹುದು. ಆದರೆ ಅವುಗಳನ್ನು ಬ್ಯಾಟರಿಗಳಿಂದಲೂ ನಿರ್ವಹಿಸಬಹುದು. ಸಾರ್ವಜನಿಕ ಸಾರಿಗೆಗೆ ಬಳಸುವ ಟ್ರಕ್‌, ವಾಹನಗಳಲ್ಲಿ ನೇರ ಪೂರೈಕೆ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಎಲೆಕ್ಟ್ರಿಕ್‌ ವಾಹನಗಳಾಗಿದ್ದರೆ ಇದರಲ್ಲಿ ಚಲಾಯಿಸಬಹುದು. ಅನುಕೂಲಕ್ಕಾಗಿ ಅಲ್ಲಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳೂ ಇರುತ್ತವೆ.

ಏನು ಪ್ರಯೋಜನ?
ಹಾಲಿ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಇ-ಹೈವೇಯಲ್ಲಿ ವಾಹನಗಳ ಓಡಾಟಕ್ಕೆ ತಗಲುವ  ವೆಚ್ಚ ಬಹಳಷ್ಟು ಕಡಿಮೆಯಾಗಲಿದೆ. ಇದು ಒಟ್ಟಾರೆ ವೆಚ್ಚದಲ್ಲಿ ಸುಮಾರು ಶೇ. 70ರಷ್ಟು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಸಾರಿಗೆ ವೆಚ್ಚ ಕಡಿಮೆಯಾದರೆ ಸಹಜವಾಗಿ ಸರಕುಗಳ ಸಾಗಣೆ ವೆಚ್ಚ ಕಡಿಮೆಯಾಗಿ ವಸ್ತುಗಳ ಬೆಲೆಯೂ ಅಗ್ಗವಾಗಲಿದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಇ-ಹೆದ್ದಾರಿ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯದ ಪ್ರಮಾಣ ಬಹಳಷ್ಟು ಕಡಿಮೆಯಾಗಲಿದೆ.

ಸವಾಲುಗಳೇನು?
ಎಲೆಕ್ಟ್ರಿಕ್‌ ಹೈವೆ ನಿರ್ಮಾಣದ ವೆಚ್ಚ ಸಾಮಾನ್ಯ ರಸ್ತೆಗಿಂತ ಅಧಿಕವಾಗಿರುತ್ತದೆ. ದೇಶಾದ್ಯಂತ ಇಂತಹ ಹೆದ್ದಾರಿಗಳನ್ನು ನಿರ್ಮಿಸುವುದು ದೊಡ್ಡ ಸವಾಲು ಮಾತ್ರವಲ್ಲ ತುಂಬಾ ದುಬಾರಿ ಹಾಗೂ ಸಾಕಷ್ಟು ಸಮಯ ಬೇಕಾಗುವುದು. ಕೇವಲ ವಿದ್ಯುತ್‌ ಹೆದ್ದಾರಿ ನಿರ್ಮಿಸಿದರೆ ಸಾಲದು. ಎಲೆಕ್ಟ್ರಿಕ್‌ ವಾಹನಗಳೂ ಅವುಗಳ ಮೇಲೆ ಓಡಬೇಕು. ಪೆಟ್ರೋಲ್‌- ಡೀಸೆಲ್‌ ಚಾಲಿತ ವಾಹನಗಳು ಎಲೆಕ್ಟ್ರಿಕ್‌ ವಾಹನಗಳೊಂದಿಗೆ ಬದಲಾಯಿಸಲು ಕೆಲವು ವರ್ಷಗಳೇ ಬೇಕಾಗಬಹುದು. ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ತಯಾರಿಕೆಯೂ ತುಂಬಾ ಕಷ್ಟ. ಯಾಕೆಂದರೆ ಈ ವೇಳೆ ಅನೇಕ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಪರಿಸರಕ್ಕೆ ಹಾನಿಕಾರಕ, ಅಲ್ಲದೇ ಈ ಬ್ಯಾಟರಿಗಳು ತುಂಬಾ ದುಬಾರಿಯಾಗಿರುತ್ತವೆ.

ವಿಶ್ವದ ಇತರ ಯಾವ ದೇಶಗಳಲ್ಲಿ ಎಲೆಕ್ಟ್ರಿಕ್‌ ಹೆದ್ದಾರಿ ಇವೆ?
ಇ- ಹೆದ್ದಾರಿಯನ್ನು ಪರಿಚಯಿಸಿದ ವಿಶ್ವದ ಮೊದಲ ದೇಶ ಸ್ವೀಡನ್‌. ಇಲ್ಲಿ 2016ರಲ್ಲಿ ಇ- ಹೆದ್ದಾರಿಯ ಪ್ರಯೋಗ ನಡೆಸಿ 2018ರಲ್ಲಿ ಮೊದಲ ಇ- ಹೆದ್ದಾರಿಯನ್ನು ಪ್ರಾರಂಭಿಸಿತ್ತು. ಅನಂತರ ಜರ್ಮನಿಯಲ್ಲಿ 2019ರಲ್ಲಿ ಇ- ಹೆದ್ದಾರಿ ಪ್ರಾರಂಭಿಸಿತ್ತು. ಇದರ ಉದ್ದ 6 ಮೈಲು. ಇದರ ಹೊರತಾಗಿ ಜರ್ಮನಿಯಲ್ಲಿ ಬಸ್‌ಗಳಿಗಾಗಿ ವಯರ್‌ಲೆಸ್‌ ಎಲೆಕ್ಟ್ರಿಕ್‌ ರಸ್ತೆಯನ್ನು ನಿರ್ಮಿಸಿದೆ. ಬ್ರಿಟನ್‌, ಅಮೆರಿಕದಲ್ಲೂ ಇ- ಹೆದ್ದಾರಿಯ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next