Advertisement

ಜಾರಿ ನಿರ್ದೇಶನಾಲಯದ ಕಿವಿ ಹಿಂಡಿದ ದಿಲ್ಲಿ ಹೈಕೋರ್ಟ್‌

10:53 PM Jan 26, 2023 | Team Udayavani |

ಜಾರಿ ನಿರ್ದೇಶನಾಲಯ(ಇ.ಡಿ.) ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಹೊರತುಪಡಿಸಿದಂತೆ ಇನ್ಯಾವುದೇ ಇತರ ಅಪರಾಧ ಅಥವಾ ಅಕ್ರಮ ಪ್ರಕರಣಗಳ ಬಗೆಗೆ ತನಿಖೆ ನಡೆಸುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್‌ ತನ್ನ ಮಹತ್ವದ ಆದೇಶವೊಂದರಲ್ಲಿ ಸ್ಪಷ್ಟಪಡಿಸಿದೆ. ಖಾಸಗಿ ಕಂಪೆನಿಯೊಂದರ ವಿರುದ್ಧ ಇ.ಡಿ. ಕೈಗೊಂಡ ತನಿಖೆ ಮತ್ತು ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿ ಹೈಕೋರ್ಟ್‌ ಈ ತೀರ್ಪು ನೀಡಿದೆ.

Advertisement

ದಿಲ್ಲಿ ಹೈಕೋರ್ಟ್‌ನ ಈ ತೀರ್ಪು ಇ.ಡಿ.ಯ ಅಧಿಕಾರ ವ್ಯಾಪ್ತಿಯನ್ನು ನೆನಪಿಸಿಕೊಟ್ಟಿದ್ದೇ ಅಲ್ಲದೆ ಇತರ ಅಪರಾಧ ಅಥವಾ ಅಕ್ರಮ ಪ್ರಕರಣಗಳ ತನಿಖೆಗಾಗಿ ದೇಶದಲ್ಲಿ ಬೇರೆ ಬೇರೆ ತನಿಖಾ ಸಂಸ್ಥೆಗಳಿದ್ದು ಅವುಗಳ ಕಾರ್ಯವ್ಯಾಪ್ತಿಯನ್ನು ಕಬಳಿಸದಿರುವಂತೆಯೂ ಇ.ಡಿ.ಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ. ದೇಶದ ಸ್ವತಂತ್ರ ಮತ್ತು ಉನ್ನತ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಗಳ ನಡುವೆಯೇ ದಿಲ್ಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಚಾಟಿ ಬೀಸಿರುವುದು ರಾಜಕೀಯವಾಗಿಯೂ ಒಂದಿಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆ ಸೆಕ್ಷನ್‌ 3ರ ಅಡಿಯಲ್ಲಿ ಬರುವ ಅಕ್ರಮ ಹಣ ವರ್ಗಾವಣೆ ಅಪರಾಧ ಪ್ರಕರಣಗಳನ್ನು ಮಾತ್ರ ತನಿಖೆ ಮಾಡಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿದೆ. ಯಾವುದೇ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಆಧರಿಸಿ ಬೇರೆ ತೆರನಾದ ಅಪರಾಧಗಳು ನಡೆದಿವೆ ಎಂದು ಊಹಿಸಿ ಆ ಪ್ರಕರಣಗಳ ತನಿಖೆಯನ್ನು ನಡೆಸಲು ಇ.ಡಿ.ಗೆ ಅಧಿಕಾರವಿಲ್ಲ. ಅಕ್ರಮ ಹಣ ವರ್ಗಾವಣೆ ಅಪರಾಧ ಪ್ರಕರಣದ ತನಿಖೆಯ ವೇಳೆ ಇತರ ಪ್ರಕರಣಗಳ ಬಗೆಗೆ ಸುಳಿವು ಲಭಿಸಿದಲ್ಲಿ ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವುದು ಇ.ಡಿ.ಯ ಜವಾ ಬ್ದಾರಿ ಯಾಗಿದೆ ಎಂದು ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶ ಯಶವಂತ್‌ ವರ್ಮಾ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಕೂಡ ಅವರು ತಮ್ಮ ಆದೇಶದಲ್ಲಿ ಉಲ್ಲೇಖೀಸಿದ್ದಾರೆ.

ತನಿಖಾ ಸಂಸ್ಥೆಗಳನ್ನು ಚುನಾಯಿತ ಸರಕಾರಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಈ ವಿಷಯವಾಗಿ ಆಡಳಿತಾರೂಢ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಲೇ ಬಂದಿದೆ. ಈ ಹಿಂದಿನ ಕಾಂಗ್ರೆಸ್‌, ಯುಪಿಎ ಸರಕಾರದ ಅವಧಿಯಲ್ಲಿ ಈ ವಾಗ್ಯುದ್ಧ ಅತಿರೇಕಕ್ಕೆ ಹೋಗಿತ್ತು. ಸಿಬಿಐ ವಿಚಾರವಾಗಿ ಸುಪ್ರೀಂ ಕೋರ್ಟ್‌, ಅಂದಿನ ಯುಪಿಎ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತಾವಧಿಯಲ್ಲಿಯೂ ತನಿಖಾ ಸಂಸ್ಥೆಗಳ ದುರುಪಯೋಗದ ಬಗೆಗೆ ವಿಪಕ್ಷಗಳು ನೇರವಾಗಿ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಬಂದಿವೆ. ಅಷ್ಟು ಮಾತ್ರವಲ್ಲದೆ ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ವಿಪಕ್ಷ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡುತ್ತಲೇ ಬಂದಿವೆ.

ಇವೆಲ್ಲದರ ನಡುವೆ ದಿಲ್ಲಿ ಹೈಕೋರ್ಟ್‌ ಇ.ಡಿ.ಗೆ ಚಾಟಿ ಬೀಸಿ ಅದರ ಹೊಣೆಗಾರಿಕೆಯನ್ನು ಜ್ಞಾಪಿಸಿರುವುದು ಈ ಕುರಿತಾಗಿನ ಚರ್ಚೆಯನ್ನು ಮತ್ತೂಂದು ಮಜಲಿಗೆ ಕೊಂಡೊಯ್ಯುವ ಎಲ್ಲ ಸಾಧ್ಯತೆ ಇದೆ. ಇದೊಂದು ರಾಜಕೀಯೇತರ ಪ್ರಕರಣದ ತೀರ್ಪು ಆಗಿದ್ದರೂ ಇ.ಡಿ. ಕಾರ್ಯವೈಖರಿಯ ಬಗೆಗೆ ಹೈಕೋರ್ಟ್‌ ಬೆಟ್ಟು ಮಾಡಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

Advertisement

ಇದನ್ನೂ ಓದಿ: ಈ ರಾಜ್ಯದ ಎಲ್ಲ ನಿರುದ್ಯೋಗಿ ಯುವಕರಿಗೆ ಮುಂದಿನ ವಿತ್ತೀಯ ವರ್ಷದಿಂದ ಮಾಸಿಕ ಭತ್ಯೆ

Advertisement

Udayavani is now on Telegram. Click here to join our channel and stay updated with the latest news.

Next