ಹೊಸದಿಲ್ಲಿ: ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ನ ಸಾಂವಿಧಾನಿಕ ಸಿಂಧುತ್ವವನ್ನು ದೆಹಲಿ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಯೋಜನೆಯಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.
“ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಶಸ್ತ್ರ ಪಡೆಗಳು ಸುಸಜ್ಜಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಗ್ನಿಪಥ್ ಯೋಜನೆಯನ್ನು ಪರಿಚಯಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ:ಬಹುನಿರೀಕ್ಷಿತ ಮಂಗಳೂರು ವೀಕೆಂಡ್ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆ ವಿಳಂಬ,ಚುನಾವಣೆಯೂ ಅಡ್ಡಿ
ಈ ಯೋಜನೆಯನ್ನು ಪ್ರಶ್ನಿಸಿ ಕನಿಷ್ಠ 23 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲಾ 23 ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ. ಕೇಂದ್ರದ ಅಗ್ನಿಪಥ ಯೋಜನೆಯನ್ನು ಪರಿಚಯಿಸಿದ ನಂತರ ನಡೆದ ಪ್ರತಿಭಟನೆಗಳ ತನಿಖೆಗೆ ಕೋರಿ ವಕೀಲರೊಬ್ಬರು ಸಲ್ಲಿಸಿದ ಹೊಸ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಕಳೆದ ವರ್ಷ ನಿರಾಕರಿಸಿತ್ತು.
ದೇಶದೆಲ್ಲೆಡೆ ಹಲವು ಹೈಕೋರ್ಟ್ ಗಳಲ್ಲಿ ಈ ಯೋಜನೆಯನ್ನು ಪ್ರಶ್ನಿಸಿ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ಈ ಎಲ್ಲಾ ವಿಷಯಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿತು.