ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 12,600 ಕೋಟಿ ರೂ. ಸಾಲ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮಾಡಿಕೊಂಡಿರುವ ಮನವಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಇಂದು ಬುಧವಾರ ಜಾರಿ ನಿರ್ದೇಶನಾಲಯಕ್ಕೆ ನೊಟೀಸ್ ಜಾರಿ ಮಾಡಿದ್ದು ಸಾಲ ವಂಚನೆ ಮೊತ್ತ ನಿಖರವಾಗಿ ಎಷ್ಟು ? ಎಂದು ಪ್ರಶ್ನಿಸಿದೆ.
ಜಾರಿ ನಿರ್ದೇಶನಾಲಯ ಯಾವ ಅಧಿಕಾರದಲ್ಲಿ ನೀರವ್ ಮೋದಿ ಅವರ ಆಸ್ತಿ ಪಾಸ್ತಿ ಶೋಧನೆ ಕೈಗೊಂಡಿತು ಎಂಬುದನ್ನು ಕೂಡ ದಿಲ್ಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ನೊಟೀಸಿನಲ್ಲಿ ಪ್ರಶ್ನಿಸಿದೆ.
ನೀರವ್ ಮೋದಿ ಪ್ರಕರಣದ ತನಿಖೆ ಪೂರ್ವ ಯೋಜಿತವಾಗಿರುವಂತಿದೆ. ಏಕೆಂದರೆ ನೀರವ್ ಮೋದಿ ಅವರ ವಕೀಲರಾಗಿರುವ ವಿಜಯ್ ಅಗ್ರವಾಲ್ ಅವರಿಗೂ ಕೇಸಿನ ವಿವರಗಳು ಸ್ಪಷ್ಟವಾಗಿ ತಿಳಿದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಸಿದೆ.
ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನೀರವ್ ಮೋದಿ ಅವರ ವಕೀಲ ವಿಜಯ್ ಅಗ್ರವಾಲ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಸೂಚಿಸಿದೆ. ED ಬಳಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸತ್ಯಾಂಶಗಳ ವಿವರ ಇಲ್ಲದಿರುವುದನ್ನು ಗಮನಿಸಿದ ನ್ಯಾಯಾಲಯ ಈ ಕೇಸ್ ಪೂರ್ವ ಯೋಜಿತ ವಾಗಿರುವಂತಿದೆ ಎಂದು ಹೇಳಿದೆ. ನಮ್ಮ ಬಳಿ ಕೇಸಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ಇಲ್ಲದಿರುವುದೇ ನಮ್ಮ ಕೇಸಿನ ಮುಖ್ಯ ವಿಷಯವಾಗಿದೆ ಎಂದು ನಾನು ಕೋರ್ಟಿಗೆ ಮನವರಿಕೆ ಮಾಡಿದ್ದೇನೆ’ ಎಂದು ಹೇಳಿದರು.