ಹೊಸದಿಲ್ಲಿ: ಎನ್ ಎಸ್ ಇ ಉದ್ಯೋಗಿಗಳ ಅಕ್ರಮ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಈಗಾಗಲೇ ಆಕೆಗೆ ಜಾಮೀನು ನೀಡಿತ್ತು.
ಐಸೆಕ್ – ಸೈಬರ್ ಸೆಕ್ಯುರಿಟಿ ಸಂಸ್ಥೆಯು ಎನ್‌ಎಸ್‌ಇ ಉದ್ಯೋಗಿಗಳ ಫೋನ್‌ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡುವ ಮೂಲಕ 4.54 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ, ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದರು. ಸೈಬರ್ ದೋಷಗಳ ಅಧ್ಯಯನದ ನೆಪದಲ್ಲಿ ಸಂಸ್ಥೆಯು ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಕರೆಗಳನ್ನು ಅಕ್ರಮವಾಗಿ ತಡೆಹಿಡಿಯುತ್ತಿತ್ತು.
ಕಾನೂನುಬಾಹಿರ ಚಟುವಟಿಕೆಯಿಂದ ಹಣ ಗಳಿಸಲು ಐಸೆಕ್ ಗೆ ಅವಕಾಶ ನೀಡುವ ಮೂಲಕ ಎನ್‌ಎಸ್‌ಇ ಗೆ ವಿತ್ತೀಯ ನಷ್ಟ ಉಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಎನ್‌ಎಸ್‌ಇ ಅಧಿಕಾರಿಗಳು ಮತ್ತು ಐಸೆಕ್ ನಡುವೆ ಒಪ್ಪಂದ ಅಂತಿಮಗೊಳಿಸಿದಾಗ, ಖಾಸಗಿ ಸಂಸ್ಥೆಯನ್ನು ಮಾಜಿ ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಪ್ರತಿನಿಧಿಸಿದ್ದರು.
ಮಾಜಿ ಎನ್‌ಎಸ್‌ಇ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಅವರು ಉದ್ಯೋಗಿಗಳು ಚರ್ಚೆ ನಡೆಸುತ್ತಿದ್ದಾರೆಯೇ ಅಥವಾ ವಿನಿಮಯ ಸಂಬಂಧಿತ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆಯೇ ಎಂದು ಕಂಡುಹಿಡಿಯಲು ಬಯಸಿದ್ದರು ಎಂದು ಸಿಬಿಐ ಶಂಕಿಸಿದೆ.
ಇದನ್ನೂ ಓದಿ:ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ
ಚಿತ್ರಾ ರಾಮಕೃಷ್ಣ ಅವರನ್ನು 2022ರ ಮಾರ್ಚ್ ನಲ್ಲಿ ಸಿಬಿಐ ಬಂಧಿಸಿತು. ನ್ಯಾಯಾಲಯವು ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ದೆಹಲಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅವರು 2013 ಮತ್ತು 2016 ರ ನಡುವೆ ಎನ್ಎಸ್ಇ ನ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.