ನವದೆಹಲಿ: ಭಾರತೀಯ ಸೇನಾ ಯೋಧರು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಬೇಕೆಂಬ ಸೇನಾ ಹಿರಿಯ ಅಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಯೋಧರು ಮತ್ತು ಸೇನಾ ಅಧಿಕಾರಿಗಳು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಭಾರತೀಯ ಸೇನೆಯ ಇತ್ತೀಚಿನ ನೀತಿಯನ್ನು ಪ್ರಶ್ನಿಸಿ ಲೆಫ್ಟಿನೆಂಟ್ ಕರ್ನಲ್ ಪಿಕೆ ಚೌಧರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇತ್ತೀಚೆಗಷ್ಟೇ ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ, ಹಿರಿಯ ಸೇನಾಧಿಕಾರಿಗೆ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ನಿಮ್ಮ ಫೇಸ್ ಬುಕ್ ಖಾತೆ ಯನ್ನು ಡಿಲೀಟ್ ಮಾಡಿ, ಇಲ್ಲವೇ ಭಾರತೀಯ ಸೇನಾಪಡೆ ಹುದ್ದೆಗೆ ರಾಜೀನಾಮೆ ನೀಡಿ ಎಂದು ಹೇಳಿತ್ತು.
ದಿಲ್ಲಿ ಹೈಕೋರ್ಟ್ ನ ವಿಭಾಗೀಯ ಪೀಠದ ಜಸ್ಟೀಸ್ ರಾಜೀವ್ ಸಹೈ ಹಾಗೂ ಜಸ್ಟೀಸ್ ಆಶಾ ಮೆನನ್ ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಅರ್ಜಿ ಸಲ್ಲಿಸಿದ್ದ ಸೇನಾಧಿಕಾರಿ, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಸೇರಿ ಸಾಮಾಜಿಕ ಲತಾಣದ ಖಾತೆಗಳನ್ನು ರದ್ದು ಮಾಡುವುದರಿಂದ ಇದುವರೆಗೂ ಸಾಧಿಸಿರುವ ಸಂಪರ್ಕಗಳು ಕೈತಪ್ಪಿಹೋಗುತ್ತದೆ. ಮತ್ತೆ ಅವುಗಳನ್ನು ಪಡೆಯುವುದು ಅಸಾಧ್ಯ. ಅದ್ದರಿಂದ ಫೇಸ್ ಬುಕ್ ಖಾತೆಯನ್ನು ಹೊಂದಿರಲು ಅವಕಾಶ ಮಾಡಿಕೊಡುವಂತೆ ಭಾರತೀಯ ಸೇನಾಪಡೆಗೆ ಸೂಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.