Advertisement

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

11:45 AM Sep 16, 2024 | Team Udayavani |

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಇತ್ತೀಚೆಗಷ್ಟೇ ತಿಹಾರ್‌ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದ ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರು ಇನ್ನೆರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರವಿವಾರ (ಸೆ.15) ಘೋಷಿಸಿದ್ದಾರೆ. ಅಲ್ಲದೆ ಆಮ್‌ ಆದ್ಮಿ ಪಕ್ಷದವರೇ ಮುಂದಿನ ಸಿಎಂ ಆಗಲಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದರು.

Advertisement

ಮುಂದೆ ಜನರು ತೀರ್ಪು ನೀಡುವವರೆಗೆ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ ಇದೀಗ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ದೆಹಲಿಯಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ಚುನಾವಣೆಯ ಜೊತೆಗೆ ನವೆಂಬರ್‌ ನಲ್ಲಿ ಚುನಾವಣೆ ನಡೆಸಬೇಕೆಂದು ಕೇಜ್ರಿವಾಲ್ ರವಿವಾರ ಒತ್ತಾಯಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಜನರ ಬಳಿಗೆ ಹೋಗುತ್ತೇನೆ ಮತ್ತು ಮರುಚುನಾವಣೆ ನಂತರವೇ ಉನ್ನತ ಕಚೇರಿಗೆ ಮರಳುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಕೇಜ್ರಿವಾಲ್‌ ನಂತರದ ಎಎಪಿಯ ಉನ್ನತ ನಾಯಕರಾದ ಸಿಸೋಡಿಯಾ ಮುಖ್ಯಮಂತ್ರಿ ಹುದ್ದೆಯ ರೇಸ್‌ ನಲ್ಲಿಲ್ಲ ಎಂಬುದು ಸಾಬೀತಾಗಿದೆ.

ಮುಂದಿನ ಸಿಎಂ ಕೆಲವೇ ತಿಂಗಳುಗಳ ಕಾಲ ಕೆಲಸ ಮಾಡಬೇಕಾದರೂ ಸರಿಯಾದ ವ್ಯಕ್ತಿಯನ್ನೇ ಆಯ್ಕೆ ಮಾಡಲು ಆಪ್‌ ಮುಂದಾಗಿದೆ. ಪಕ್ಷದ ನಾಯಕರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಕಾರಣ ಮುಂದೆ ಜನರ ಎದುರು ಹೋಗುವ ವೇಳೆ ಸರಿಯಾದ ಆಡಳಿತ ನಡೆಸುವ ನಾಯಕತ್ವದ ಅಗತ್ಯ ಪಕ್ಷಕ್ಕಿದೆ.

ದೆಹಲಿ ಮುಂದಿನ ಸಿಎಂ ಆಗಬಹುದಾದ ಕೆಲವು ಹೆಸರುಗಳು ಇಲ್ಲಿದೆ

Advertisement

1 ಆತಿಶಿ

ದೆಹಲಿ ಸರ್ಕಾರದಲ್ಲಿ ಶಿಕ್ಷಣ, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳನ್ನು ಹೊಂದಿರುವ ಆತಿಶಿ ಅವರು ದೆಹಲಿ ಸಿಎಂ ರೇಸ್‌ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆಕ್ಸ್‌ ಫರ್ಡ್‌ ಪದವೀಧರೆ ಆತಿಶಿ ದೆಹಲಿಯ ಶಾಲೆಗಳ ಉನ್ನತೀಕರಣಕ್ಕೆ ಹೆಸರುವಾಸಿಯಾಗಿದ್ದಾರೆ. ಕಲ್ಕಾಜಿ ಕ್ಷೇತ್ರದ 43ರ ಹರೆಯದ ಶಾಸಕಿ ಅತಿಶಿ ಅವರು, ಮನೀಶ್ ಸಿಸೋಡಿಯಾ ಜೈಲು ಪಾಲಾದಾಗ ಸಚಿವೆಯಾದರು. ಪ್ರಮುಖ ನಾಯಕರಾದ ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಇಬ್ಬರೂ ಜೈಲಿನಲ್ಲಿದ್ದಾಗ ಅತಿಶಿ ಪಕ್ಷದ ಮತ್ತು ಸರ್ಕಾರದ ಮುಂಚೂಣಿಯಲ್ಲಿದ್ದು ನಡೆಸಿದರು. ಆಗಸ್ಟ್ 15 ರಂದು, ದೆಹಲಿ ಸರ್ಕಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಆತಿಶಿ ಅವರನ್ನು ಕೇಜ್ರಿವಾಲ್ ಆಯ್ಕೆ ಮಾಡಿದ್ದರು.

2 ಸೌರಭ್‌ ಭಾರದ್ವಾಜ್‌

ಗ್ರೇಟರ್‌ ಕೈಲಾಶ್‌ ನ ಮೂರು ಬಾರಿಯ ಶಾಸಕ ಸೌರಭ್‌ ಭಾರದ್ವಾಜ್‌ ಆರೋಗ್ಯ ಸಚಿವರಾಗಿದ್ದಾರೆ. ಇವರು ಕೂಡಾ ಸಿಸೋಡಿಯಾ ಬಂಧನದ ಬಳಿಕ ಸಂಪುಟದ ಭಾಗವಾಗಿದ್ದರು. ಹಿಂದೆ ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿದ್ದ ಭಾರದ್ವಾಜ್‌ ಅರವಿಂದ ಕೇಜ್ರಿವಾಲ್‌ ಅವರ 49 ದಿನಗಳ ಸರ್ಕಾರದಲ್ಲಿಯೂ ಸಚಿವರಾಗಿದ್ದರು. ಅವರು ಆಪ್‌ ನ ರಾಷ್ಟ್ರೀಯ ವಕ್ತಾರರಾಗಿದ್ದಾರೆ.

3 ರಾಘವ್‌ ಛಡ್ಡಾ

ರಾಜ್ಯಸಭಾ ಸಂಸದರಾಗಿರುವ ರಾಘವ್‌ ಛಡ್ಡಾ ಅವರು ಆಪ್‌ ನ ಕಾರ್ಯಕಾರಣಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರಾಗಿದ್ದಾರೆ. ಈ ಹಿಂದೆ ಚಾರ್ಟೆಡ್‌ ಅಕೌಂಟೆಂಟ್‌ ಆಗಿದ್ದ ಛಡ್ಡಾ ಆಪ್‌ ಉದಯದ ಬಳಿಕ ರಾಜಕೀಯ ಸೇರಿದರು. ರಾಜಿಂದರ್‌ ನಗರ್‌ ಶಾಸಕರಾಗಿದ್ದ ರಾಘವ್‌, 2022ರಲ್ಲಿ ಪಂಜಾಬ್‌ ನಲ್ಲಿ ಆಪ್‌ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. 35 ವರ್ಷದ ರಾಘವ್‌ ಛಡ್ಡಾ ಆಪ್‌ ನ ಯುವ ನಾಯಕರಲ್ಲಿ ಪ್ರಮುಖ. ಇತ್ತೀಚೆಗೆ ಅವರು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಅವರನ್ನು ವಿವಾಹವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next