ನವದೆಹಲಿ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಸರ್ಕಾರ ಬುಧವಾರ (ಸೆಪ್ಟೆಂಬರ್ 08) ತಿಳಿಸಿದೆ.
ಇದನ್ನೂ ಓದಿ:ರಚಿತಾ ರಾಮ್ ಥ್ರಿಲ್ ಆಗೋದಕ್ಕೆ ಸೋದರಿ ನಿತ್ಯಾ ರಾಮ್ ಕಾರಣವಂತೆ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಸೋಂಕು ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 10ರಂದು ಗಣೇಶೋತ್ಸವ ಸಂದರ್ಭದಲ್ಲಿ ಜನರು ಮನೆಯಲ್ಲಿಯೇ ಹಬ್ಬವನ್ನು ಆಚರಿಸುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ. ತಾತ್ಕಾಲಿಕ ಟೆಂಟ್ ಅಥವಾ ಪೆಂಡಾಲ್ ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಜಿಲ್ಲಾಧಿಕಾರಿಗಳು ಹಾಗೂ ಡೆಪ್ಯುಟಿ ಕಮಿಷನರ್ಸ್ ಗಳು ನಿಗಾ ವಹಿಸಬೇಕೆಂದು ಡಿಡಿಎಂಎ ಬಿಡುಗಡೆಗೊಳಿಸಿರುವ ಆದೇಶದಲ್ಲಿ ತಿಳಿಸಿದೆ.
ಯಾವುದೇ ಧಾರ್ಮಿಕ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡುವಂತಿಲ್ಲ. ಯಾವುದೇ ರೀತಿಯ ಮೆರವಣಿಗೆಗೆ ಅನುಮತಿ ಕೂಡ ನೀಡಲಾಗುವುದಿಲ್ಲ ಎಂದು ಹೇಳಿದೆ. ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಡಿಎಂಎ ಆದೇಶದಲ್ಲಿ ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಷರತ್ತಿನ ಗಣೇಶೋತ್ಸವ ನಡೆಸಲು ಸರ್ಕಾರ ಅನುಮತಿ ನೀಡಿದ್ದು, ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಕ್ಕೆ ನಿಷೇಧ ಹೇರಿದೆ. ಕೋವಿಡ್ ಹಿನ್ನೆಲೆಯಲ್ಲಿ ನಿಯಮ ಪಾಲಿಸುವಂತೆ ಕರ್ನಾಟಕ ಸರ್ಕಾರ ಸೂಚನೆ ನೀಡಿದೆ. ಗಣೇಶೋತ್ಸವ ಸಂದರ್ಭದಲ್ಲಿ 20 ಮಂದಿಗಿಂತ ಹೆಚ್ಚು ಜನರು ಗುಂಪುಗೂಡದಂತೆ ಹಾಗೂ ಗಣೇಶೋತ್ಸವ ಆಯೋಜಕರು ಕೋವಿಡ್ ನೆಗೆಟಿವ್ ವರದಿ, ಲಸಿಕೆ ಪಡೆದಿರುವ ಪ್ರಮಾಣಪತ್ರ ಪಡೆದಿರಬೇಕು ಎಂಬ ಹಲವು ಷರತ್ತುಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ನಡೆಸಲು ಅನುಮತಿ ನೀಡಿದೆ.