ನವದೆಹಲಿ: ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಕೋವಿಡ್ 19 ರೋಗಿಗಳ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಶುಕ್ರವಾರ( ಮೇ 28) ಘೋಷಿಸಿದೆ.
ಇದನ್ನೂ ಓದಿ:ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ: ಬೊಮ್ಮಾಯಿ
ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಕೋವಿಡ್ ರೋಗಿಗಳ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಆರು ವೈದ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿರುವುದಾಗಿ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ತಿಳಿಸಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಕೋವಿಡ್ ರೋಗಿಗಳ ಕುಟುಂಬ ಸದಸ್ಯರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಗುರುವಾರ ಹೊರಡಿಸಿರುವ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಆಸ್ಪತ್ರೆಗಳಲ್ಲಿ ಮಾರ್ಗಸೂಚಿ ಅನ್ವಯ ಆಕ್ಸಿಜನ್ ಅನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಸಮಿತಿಗೆ ಆದೇಶದಲ್ಲಿ ಸೂಚಿಸಲಾಗಿದೆ. ಪರಿಹಾರ ನೀಡುವ ಬಗ್ಗೆ ಈ ಸಮಿತಿ ವಸ್ತುನಿಷ್ಠ ಮಾನದಂಡಗಳನ್ನು ತಯಾರಿಸಲಿದೆ. ಇದು ಪ್ರತಿ ಪ್ರಕರಣಗಳಿಗೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲು ಸೀಮಿತವಾಗಿರಲಿದೆ ಎಂದು ಆದೇಶದಲ್ಲಿ ವಿವರಿಸಿದೆ.
ಈ ಸಮಿತಿ ವಾರಕ್ಕೊಮ್ಮೆ ವರದಿಯನ್ನು ದೆಹಲಿ ಆರೋಗ್ಯ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಕಳುಹಿಸಲಿದೆ. ಮೇ ತಿಂಗಳಿನಲ್ಲಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಹಿರಿಯ ವೈದ್ಯ ಸೇರಿದಂತೆ 12 ಮಂದಿ ಕೋವಿಡ್ ರೋಗಿಗಳು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.