Advertisement

ಜೆ.ಎನ್.ಯು. ದೇಶವಿರೋಧಿ ಘೋಷಣೆ: ಕನ್ಹಯ್ಯಾ ಕುಮಾರ್ ವಿಚಾರಣೆಗೆ ಆಪ್ ಸರಕಾರ ಅಸ್ತು

10:07 AM Feb 29, 2020 | Hari Prasad |

ನವದೆಹಲಿ: ಜವಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲಿದ್ದ ದೇಶವಿರೋಧಿ ಘೋಷಣೆ ಆರೋಪದ ತನಿಖೆಯನ್ನು ನಡೆಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರಕಾರ ಶುಕ್ರವಾರದಂದು ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ ಅನುಮತಿ ನೀಡಿದೆ.

Advertisement

2016ರಲ್ಲಿ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ದೆಹಲಿಯ ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ ಮತ್ತು 120 ಬಿಗಳ ಅಡಿಯಲ್ಲಿ ಪ್ರಕರಣ ದಾಖಲುಗೊಂಡಿತ್ತು. 2019ರ ಜನವರಿ 14ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೆಲ್ಲರ ವಿರುದ್ಧ ಆರೋಪ ಪಟ್ಟಿಯನ್ನೂ ಸಹ ಸಲ್ಲಿಸಲಾಗಿತ್ತು.

2016ರ ಫೆಬ್ರವರಿ 9ರಂದು ಜೆ.ಎನ್.ಯು. ಕ್ಯಾಂಪಸ್ ನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದ ಆರೋಪ ಇವರೆಲ್ಲರ ಮೇಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೆ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಪೊಲೀಸರು ಕನ್ಹಯ್ಯಾ ಕುಮಾರ್ ನನ್ನು ಬಂ‍ಧಿಸಿದ್ದರು.

ಈ ತಿಂಗಳ ಪ್ರಾರಂಭದಲ್ಲಿ ಕನ್ಹಯ್ಯಾ ಕುಮಾರ್ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಸರಕಾರಕ್ಕೆ ನೆನವರಿಕೆ ಪತ್ರವೊಂದನ್ನು ಸಲ್ಲಿಸುವಂತೆ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪುರುಷೋತ್ತಮ್ ಪಾಠಕ್ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡುವ ವಿಚಾರ ದೆಹಲಿ ಸರಕಾರದ ಬಳಿಯಲ್ಲಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಾಲಯ ಈ ನಿರ್ದೇಶನವನ್ನು ನೀಡಿತ್ತು.

Advertisement

ಕನ್ಹಯ್ಯಾ ಕುಮಾರ್ ಸೇರಿದಂತೆ ಉಮರ್ ಖಾಲಿದ್, ಅನಿರ್ ಭಾನ್, ಅಕಿಬ್ ಹುಸೈನ್, ಮುಜಿಬ್ ಅಮರ್ ಗುಲ್, ಬಶ್ರತ್ ಅಲಿ ಮತ್ತು ಖಾಲಿದ್ ಬಶೀರ್ ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ಇತರರಾಗಿದ್ದಾರೆ. ಕನ್ಹಯ್ಯಾ ಕುಮಾರ್ ಅವರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next